ಸಾಗುವಳಿ ಪತ್ರಕ್ಕೆ ಕೃಷಿಕರ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ

14
Published on

ಮೈಸೂರು: ರೈತರಿಗೆ ಸಾಗುವಳಿ ಪತ್ರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್)ದ ಮೈಸೂರು ಜಿಲ್ಲಾ ಸಮಿತಿ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಸುಮಾರು 60 ವರ್ಷಗಳಿಂದ ಗೋಮಾಳ, ಗುಂಡು ತೋಪು, ಅರಣ್ಯ ಭೂಮಿಗಳಲ್ಲಿ ಬಡ ಬಗರ್ ಹುಕುಂ ಸಾಗುವಳಿದಾರರು ಉಳುಮೆ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಆದರೂ ಹಕ್ಕುಪತ್ರ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಡ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡದೆ ಕಾನೂನಿನ ತೊಡಕಿನ ನೆಪ ಹೇಳಿ ವಂಚಿಸಲಾಗುತ್ತಿದೆ. ಆದರೆ ಕೈಗಾರಿಕೆಗಳಿಗೆ, ಸಂಘ, ಸಂಸ್ಥೆಗಳಿಗೆ ಮಾತ್ರ ರೈತರು ಸಾಗುವಳಿ ಮಾಡುತ್ತಿರುವ ಭೂಮಿ ನೀಡಲಾಗುತ್ತಿದೆ. ಆಗ ಅಡ್ಡಿಯಾಗದ ಕಾನೂನು ಬಡ ರೈತರಿಗೆ ಸಾಗುವಳಿ ನೀಡಲು ಅಡ್ಡಿಯಾಗುತ್ತಿರುವುದು ವಿಷಾದನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಾನುವಾರುಗಳಿಗೆ ಗೋಮಾಳ ಇರಬೇಕೆಂಬ ಕಾರಣ ಹೇಳಿ ಸಾಗುವಳಿ ವಂಚಿಸಲಾಗುತ್ತಿದೆ. ಆದರೆ 100 ಹಸುಗಳಿಗೆ 30 ಎಕರೆ ಜಮೀನು ಬಿಟ್ಟು ಉಳಿದ ಜಮೀನನ್ನು ರೈತರಿಗೆ ನೀಡುವ ಅವಕಾಶವಿದೆ. ಸ್ಥಳೀಯ ಅಧಿಕಾರಿಗಳು ಇದರ ಬಗ್ಗೆ ಗಮನ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೊಂದೆಡೆ ಅರಣ್ಯ ಭೂಮಿಗಳಲ್ಲಿ ಸಾಗುವಳಿಗೆ ಅರ್ಜಿ ಸಲ್ಲಿಸಿ ರೈತರು ವ್ಯವಸಾಯ ಮಾಡುತ್ತಿದ್ದು, ಅರಣ್ಯ ಇಲಾಖೆ ಈಚೆಗೆ ರೈತರಿಗೆ ನೋಟಿಸ್ ನೀಡಿ ಉಳುಮೆ ಮಾಡುತ್ತಿರುವ ಭೂಮಿಗೆ ದಾಖಲೆ ಕೇಳುತ್ತಿದೆ. ಇಲ್ಲವಾದರೆ ಒತ್ತುವರಿ ತೆರವು ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು.

ನಗರದ 10 ಕಿ.ಮೀ ವ್ಯಾಪ್ತಿಯಲ್ಲಿಯೂ ಬಡ ರೈತರು ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಆದರೆ ಈಚೆಗೆ ನಗರ ವ್ಯಾಪ್ತಿ ವಿಸ್ತರಣೆಯಾಗುತ್ತಿರುವುದು, ನಗರಸಭೆ, ಪುರಸಭೆಗಳು ರಚನೆಯಾಗಿರುವುದರಿಂದ ಈ ರೈತರು ಸಾಗುವಳಿಯಿಂದ ವಂಚಿತರಾಗಿದ್ದಾರೆ ಎಂದರು.

ಬಡ ರೈತರಿಗೆಲ್ಲ ಈ ಭೂಮಿಯೇ ಜೀವನಕ್ಕೆ ಆಧಾರವಾಗಿದ್ದು, ಇವರಿಗೆ ಸಾಗುವಳಿ ಪತ್ರ ನೀಡಬೇಕು. ತಕ್ಷಣ ದರಖಾಸ್ತು ಸಮಿತಿ ರಚಿಸಿ ಬಾಕಿ ಇರುವ ಅರ್ಜಿ ವಿಲೇವಾರಿ ಮಾಡಬೇಕು, ರೈತರ ಜಮೀನುಗಳನ್ನು ಪಕ್ಕಪೋಡು ಮಾಡಬೇಕು ಎಂದು ಆಗ್ರಹಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ಚಿಕ್ಕಣ್ಣೇಗೌಡ, ಕಾರ್ಯದರ್ಶಿ ಜಗದೀಶ್ ಸೂರ್ಯ, ಚಂದ್ರಶೇಖರ್ ಕೋಟೆ, ಮುಖಂಡರಾದ ಇಂದಿರಾನಗರ ಪ್ರಶಾಂತ್, ವೀರಭದ್ರಪ್ಪ, ಲೋಕೇಶ್, ಸಣ್ಣ ನಾಯ್ಕ, ರಾಜಶೇಖರ್, ಪುಟ್ಟರಾಜು, ಚಂದರಾಜು, ಗೋಪಾಲ್, ಕಣಗಾಲು ಲೋಕೇಶ್, ಪುಟ್ಟರಾಜ, ನೂರಾಣಿ, ಚೌಡಮ್ಮ, ಚೆಲುವಮ್ಮ, ರತ್ನ, ಮುಳ್ಳೂರು ಮಹಾದೇವ, ಸಿದ್ದಯ್ಯ ಮಂಜೇಗೌಡ, ಜಯರಾಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net