

ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತಿನಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಯಿತು.
31ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ ನಡೆದ ಪ್ರತಿಭಟನೆಯಲ್ಲಿ, ಕರ್ನಾಟಕದ 49 ಪರಿಶಿಷ್ಟ ಪಂಗಡಗಳನ್ನು ಒಳಗೊಂಡಂತೆ ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮವನ್ನು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಪ್ರತ್ಯೇಕಿಸಿ ಸ್ಥಾಪಿಸಬೇಕು ಎಂದು ಆಗ್ರಹಿಸಲಾಯಿತು.
ಈ ಅಭಿವೃದ್ಧಿ ನಿಗಮದ ಮೂಲಕ ಜಿಲ್ಲಾವಾರು ಮತ್ತು ಬುಡಕಟ್ಟುವಾರು ಆದಿವಾಸಿ ಪರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು, ಒಳಮೀಸಲಾತಿಯನ್ನು ಕೇವಲ ಪ್ರಬಲ ವರ್ಗಕ್ಕೆ ಮಾತ್ರ ನೀಡದೆ 49 ಬುಡಕಟ್ಟುಗಳಿಗೂ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅರಣ್ಯ ಹಕ್ಕು ಕಾಯ್ದೆಯ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಬೇಕು, ಇತ್ತೀಚೆಗೆ ಅರಣ್ಯ ಇಲಾಖೆ ಅರಣ್ಯ ಹಕ್ಕು ಕಾಯ್ದೆ ಉಲ್ಲಂಘನೆ ಮಾಡಿದ ಆದೇಶ ಹಿಂಪಡೆದು ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆ ಸಂರಕ್ಷಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕದ ಜೇನು ಕುರುಬ ಮತ್ತು ಕೊರಗ ಸಮುದಾಯಗಳನ್ನು ಆದಿಮ ಬುಡಕಟ್ಟು ಪಟ್ಟಿಗೆ ಸೇರಿಸಿ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ಕಲ್ಪಿಸಿದೆ. ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಆಂಧ್ರಪ್ರದೇಶದ ಜೆಂಚು ಬುಡಕಟ್ಟು, ತೆಲಂಗಾಣದ ಇರುಳರ್ ಬುಡಕಟ್ಟು, ತಮಿಳುನಾಡಿನ ಕಥೋಡಿ, ಕಾತಕಾರಿ ಬುಡಕಟ್ಟು, ಗುಜುರಾತ್ ಹಾಗೂ ಮಹಾರಾಷ್ಟ್ರದ ಕಾಟ್ಟುನಾಯಕನ್ ಬುಡಕಟ್ಟು, ಕೇರಳ, ತಮಿಳುನಾಡಿನ ತೋಡ ಬುಕಟ್ಟು, ಸಿದ್ದಿಬುಡಕಟ್ಟು ಗುಜುರಾತ ರಾಜ್ಯಗಳಲ್ಲಿ ಆದಿಮ ಬುಡಕಟ್ಟುಗಳೆಂದು ಕೇಂದ್ರ ಸರ್ಕಾರ ಸಂವಿಧಾನಬದ್ಧವಾಗಿ ಆದಿಮ ಬುಡಕಟ್ಟು ಗಳೆಂದು ವಿಶೇಷ ಸ್ಥಾನಮಾನ ಕಲ್ಪಿಸಿದ್ದು, ಎಲ್ಲರಿಗೂ ಮನ್ನಣೆ ಸಿಗಬೇಕು ಎಂದರು.
ಬುಡಕಟ್ಟು ಜನರಪರ ರಾಜ್ಯ, ಕೇಂದ್ರದಿಂದ ಇದುವರೆವಿಗೂ ಅನುಷ್ಠಾನಗೊಂಡಿರುವ ಯೋಜನೆಗಳ ವೆಚ್ಚ ಮತ್ತು ಕೈಗೊಂಡ ಕಾರ್ಯಗಳ ಮೌಲ್ಯಮಾಪನವಾಗಬೇಕು. ಶೈಕ್ಷಣಿಕ ಮೀಸಲಾತಿ ಒಂದೇ ಸಮುದಾಯದ ಪಾಲಾಗಿದೆ. ಮೂಲ ಆದಿವಾಸಿಗಳಿಗೆ ಮೀಸಲಾತಿ ಗಗನಕುಸುಮವಾಗಿದೆ. ಆದ್ದರಿಂದ ಪರಿಶಿಷ್ಟ ಜಾತಿ ಒಳ ಮೀಸಲಾತಿಯ ಆಯೋಗದಂತೆ ಪರಿಶಿಷ್ಟ ಪಂಗಡಕ್ಕೂ ಆಯೋಗ ರಚಿಸಿ ಸಮೀಕ್ಷೆ ಕೈಗೊಂಡು ಸೂಕ್ತ ಒಳಮೀಸಲಾತಿಯನ್ನು ಕಲ್ಪಿಸಬೇಕು ಆಗ್ರಹಿಸಿದರು.
ಆದಿವಾಸಿ ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂಬ ಮನವಿ ಜತೆ ಇತರ ಮನವಿಯನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಪರಿಷತ್ತಿನ ರಾಜ್ಯ ಅಧ್ಯಕ್ಷ ಎಂ.ಕೃಷ್ಣಯ್ಯ, ಜಿಲ್ಲಾಧ್ಯಕ್ಷ ವೈ.ಕೆ.ಸುಬ್ರಮಣ್ಯ, ಮುಖಂಡರಾದ ರಾಜು, ನಾಗರಾಜು, ಮಂಜುನಾಥ, ಮುತ್ತ, ಕುಮಾರ್, ಸ್ವಾಮಿ ಇತರರಿದ್ದರು.