

ಮೈಸೂರು: ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಸಾಮಗ್ರಿ ಖರೀದಿಯ ಇ-ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಸೋಮವಾರ ಪ್ರತಿಭಟನೆ ನಡೆಯಿತು.
ಸಿದ್ಧಾರ್ಥ ಬಡಾವಣೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿದ ವೇದಿಕೆ ಕಾರ್ಯಕರ್ತರು, ಜಿಲ್ಲೆಯ 32 ಗ್ರಾಮ ಪಂಚಾಯಿತಿ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ತಲಾ 24.75 ಲಕ್ಷ ರೂ. ನಂತೆ ಒಟ್ಟು 7.92 ಕೋಟಿ ರೂ. ಬಿಡುಗಡೆಯಾಗಿದೆ. ಕೆಟಿಪಿಪಿ ನಿಯಮಾನುಸಾರ ಕಾಮಗಾರಿಗಳಿಗೆ ಸಾಮಗ್ರಿ ಖರೀದಿ ಮಾಡುವಂತೆ ಆದೇಶಿಸಲಾಗಿದೆ. ಆದರೆ ಹಲವು ಗ್ರಾಮ ಪಂಚಾಯಿತಿ ಒಂದೇ ಏಜೆನ್ಸಿಗೆ ಅನುಕೂಲವಾಗುವಂತೆ ಟೆಂಡರ್ ಪ್ರಕ್ರಿಯೆ ಕೈಗೊಂಡಿರುವುದು ಸರಿಯಲ್ಲ ಎಂದು ಆರೋಪಿಸಿ ಘೋಷಣೆ ಕೂಗಿದರು.
ವೇದಿಕೆ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ್ ಮಾತನಾಡಿ, ಒಂದೇ ಏಜೆನ್ಸಿಯಿಂದ ಒಂದೇ ವಸ್ತುವಿಗೆ ಬೇರೆಬೇರೆ ಗ್ರಾಮ ಪಂಚಾಯತಿಗಳು ಬೇರೆ ಬೇರೆ ದರದಲ್ಲಿ ಸಾಮಗ್ರಿ ಖರೀದಿಸಿವೆ ಎಂದು ಆರೋಪಿಸಿದರು.
ದೂರುದಾರ ಚೆಲಿಂದ್ರ ಮಾತನಾಡಿ, ಗ್ರಾಪಂಗಳಲ್ಲಿ ಇ-ಟೆಂಡರ್‌ನಲ್ಲಿ, ಒಂದೇ ಏಜೆನ್ಸಿ ಭಾಗವಹಿಸಿ ಒಂದೇ ರೀತಿಯ ವಸ್ತುವಿಗೆ ಬೇರೆಬೇರೆ ದರ ನಿಗದಿ ಮಾಡಿರುವುದು ಅಕ್ರಮಕ್ಕೆ ಸಾಕ್ಷಿಯಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಖರೀದಿಯಲ್ಲಿ ಇಂತಹ ಕೃತ್ಯ ನಡೆದಿರುವುದು ಅನುಮಾನ ಮೂಡಿದ್ದು, ಈ ಅಕ್ರಮದಲ್ಲಿ ಭಾಗವಹಿಸಿರುವ ಗ್ರಾಮ ಪಂಚಾಯಿತಿ ಪಿಡಿಒಗಳನ್ನು ಸೇವೆಯಿಂದ ಅಮಾನತು ಮಾಡಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ವೇದಿಕೆಯ ರಾಜ್ಯ ಖಜಾಂಚಿ ನಂಜುಂಡ ಶಿವಕುಮಾರ್, ಜಿಲ್ಲಾಧ್ಯಕ್ಷ ಸಂತೋಷ್, ಕಾರ್ಯದರ್ಶಿ ಪ್ರತಾಪ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ, ಕರುನಾಡು ಲಾರಿ ಚಾಲಕರ ಪರಿಷತ್ ಅಧ್ಯಕ್ಷ ಮಾದೇವಸ್ವಾಮಿ, ಮುಖಂಡರಾದ ಪರಮೇಶ್, ಶಿವಕುಮಾರ್ ಸಿಂಧುವಳ್ಳಿ, ಹರೀಶ್, ಕಿರಣ್, ದಿಲೀಪ್ ಇತರರು ಇದ್ದರು.