

ಹುಬ್ಬಳ್ಳಿ: ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಖಂಡಿಸಿ ಹುಬ್ಬಳ್ಳಿಯಲ್ಲಿ ಏ. 25ರಂದು ಬೆಳಗ್ಗೆ 10ಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಲಾಯಿತು. ರೈಲ್ವೆ ಸ್ಟೇಷನ್ ಹತ್ತಿರದ ಈಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟು, ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಇಲ್ಲಿಯ ದೇಶಪಾಂಡೆ ನಗರದ ಶ್ರೀರಾಘವೇಂದ್ರ ಸಭಾ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಬ್ರಾಹ್ಮಣ ಸೇರಿ ವಿವಿಧ ಸಮುದಾಯದ ಜನಿವಾರಧಾರಿಗಳ ಸಭೆಯಲ್ಲಿ ಮುಖಂಡರು ಸೇರಿ ಈ ತೀರ್ಮಾನಕ್ಕೆ ಬದ್ಧರಾದರು. ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಧಾರವಾಡ ಜಿಲ್ಲಾಧ್ಯಕ್ಷ ಲಕ್ಷ್ಮಣ ಕುಲಕರ್ಣಿ ಮಾತನಾಡಿ, ವಿಶ್ವಕ್ಕೆ ಮಾರ್ಗದರ್ಶನ ನೀಡುವಂಥ ಸನಾತನ ಧರ್ಮೀಯರಿಗೆ ಅನ್ಯಾಯವಾಗಿದೆ. ನಿರಂತರ ಪ್ರಹಾರ ನಡೆಯುತ್ತಿದೆ. ಬ್ರಾಹ್ಮಣರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಇಷ್ಟಾದರೂ ಮುಖ್ಯಮಂತ್ರಿಗಳು ಕ್ಷಮೆ ಯಾಚಿಸಿಲ್ಲ. ಇದಕ್ಕೆ ಹೋರಾಟವೊಂದೇ ಪರಿಹಾರ. ನಮ್ಮ ರಕ್ತ ಚೆಲ್ಲಿಯಾದರೂ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕಿದೆ. ಹೋರಾಟದಲ್ಲಿ 10 ಸಾವಿರ ಜನರಾದರೂ ಸೇರಬೇಕೆಂದು ವಿನಂತಿಸಿದರು. ಹನುಮಂತ ಡಂಬಳ ಮಾತನಾಡಿ, ಸಂವಿಧಾನ ಪ್ರಕಾರ ನಡೆಯುತ್ತಿರುವ ನಮ್ಮ ಸಮಾಜಕ್ಕೆ ಧಕ್ಕೆಯಾಗುತ್ತಿದೆ. ಇದಕ್ಕೆ ಹೋರಾಟದ ಮೂಲಕ ಪ್ರತ್ಯುತ್ತರ ನೀಡೋಣ ಎಂದರು. ರವಿ ಆಚಾರ್ಯ ಮತ್ತು ಜಯತೀರ್ಥ ಕಟ್ಟಿ ಮಾತನಾಡಿ, ನಮ್ಮ ಧರ್ಮಕ್ಕೆ ಧಕ್ಕೆಯಾಗುತ್ತಿದೆ. ನಾವೆಲ್ಲರೂ ಧ್ವನಿ ಎತ್ತುವ ಅಗತ್ಯವಿದೆ. ಏ. 25ರಂದು ಹೋರಾಟ ಮಾಡೋಣ. ಎಲ್ಲರೂ ತಮ್ಮ ತಮ್ಮ ಕಾಯಕ, ವೈಯಕ್ತಿಕ ಕೆಲಸ ಬಿಟ್ಟು ಇದರಲ್ಲಿ ಭಾಗಿಯಾಗಬೇಕು ಎಂದು ಕರೆಯಿತ್ತರು. ಮರಾಠ ಸಮಾಜದ ಪಿ.ಬಿ. ಗಾಯಕವಾಡ, ವಿಶ್ವಕರ್ಮ ಸಮಾಜದ ಗಿರೀಶ ಬಡಿಗೇರ, ಎ.ಸಿ.ಗೋಪಾಲ, ಸಂಧ್ಯಾ ದೀಕ್ಷಿತ, ವಸಂತ ನಾಡಜೋಶಿ, ಇತರರು ಮಾತನಾಡಿದರು. ದತ್ತಮೂರ್ತಿ ಕುಲಕರ್ಣಿ ಸ್ವಾಗತ ಭಾಷಣ ಮಾಡಿದರು. ಶ್ರೀಹರಿ ಆಚಾರ್ಯ ವಾಳ್ವೇಕರ, ವೇಣುಗೋಪಾಲ ಆಚಾರ್ಯ, ವಿಶ್ವಪ್ರಿಯ ಆಚಾರ್ಯ, ಶಂಕರ ಪಾಟೀಲ ಕುಲಕರ್ಣಿ, ನರೇಂದ್ರ ಕುಲಕರ್ಣಿ, ಜೆ.ಬಿ. ಪಾಟೀಲ ಕುಲಕರ್ಣಿ, ಮನೋಹರ ಪರ್ವತಿ, ಬಿಂಧುಮಾಧವ ಪುರೋಹಿತ ಇತರರು ಇದ್ದರು.
ಜನಿವಾರಧಾರಿಗಳೆಲ್ಲರೂ ಸೇರಿ ಅಂಗಿಯ ಮೇಲೆ ಜನಿವಾರ ಹಾಕಿಕೊಂಡು ಆಂದೋಲನ ಮಾಡಬೇಕಿದೆ. ಒಂದು ಪಕ್ಷಕ್ಕೆ ಯಾರೂ ಸೀಮಿತರಾಗುವುದು ಬೇಡ. ಹೋರಾಟದಲ್ಲಿ ಭಾಗಿಯಾಗುವವರಿಗೆ ಜನಿವಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವೆ. -ಡಾ.ಜಿ.ಬಿ. ಸತ್ತೂರ, ಖ್ಯಾತ ವೈದ್ಯರು