ಸ್ಮಶಾನ ದಾರಿಗೆ ಪಟ್ಟು ಹಿಡಿದು ಪ್ರತಿಭಟನೆ

Protest by insisting on the cemetery road
ರಬಕವಿ ಬನಹಟ್ಟಿ ನಗರಸಭೆ ಎದುರು ರಬಕವಿ ಸಿಕ್ಕಲಕಾರ ಸಮುದಾಯದ ಜನರು ತಮಗೆ ಮಿಸಲಿಟ್ಟ ಸ್ಮಾಶಾನ ಜಾಗೆಗೆ ಹೋಗಲು ದಾರಿಯಿಲ್ಲದ ಕಾರಣ ಪ್ರತಿಭಟನೆ ನಡೆಸಿದರು. ಹಿರಿಯರಾದ ಶೇಖರ ಹಳಿಂಗಳಿ, ಬಾಬು ಕಿಲ್ಲೇದಾರ, ದಶಗೀರ ಸಿಕ್ಕಲಗಾರ ಇದ್ದರು.
Published on

ರಬಕವಿ/ಬನಹಟ್ಟಿ: ಸ್ಮಶಾನಕ್ಕೆ ಹೋಗಲು ಮಾರ್ಗ ಕಲ್ಪಿಸುವಂತೆ ಒತ್ತಾಯಿಸಿ ಸಿಕ್ಕಲಕಾರ ಸಮಾಜದ ಜನರು ಶನಿವಾರ ನಗರಸಭೆ ಎದುರು ಲಕ್ಕಪ್ಪ ಜಡೆಪ್ಪಾ ಸಿಕ್ಕಲಗಾರ (60) ಅವರ ಶವವಿಟ್ಟು ಪ್ರತಿಭಟನೆಗೆ ಮುಂದಾದರು.

ಶವಸಂಸ್ಕಾರ ಮಾಡಲು ಒಂದು ಎಕರೆಯಷ್ಟು ಸ್ಥಳವಿದೆ. ಆದರೆ, ಶವ ತೆಗೆದುಕೊಂಡು ಸ್ಮಶಾನಕ್ಕೆ ಹೋಗಲು ಮಾರ್ಗವಿಲ್ಲ. ರಬಕವಿ ನಗರದ ಸಿಕ್ಕಲಕಾರ ಸಮುದಾಯವರು ಅನೇಕ ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಸಮಾಜದ ಮುಖಂಡ ಶೇಖರ ಹಳಿಂಗಳಿ ಆರೋಪಿಸಿದರು.

ಡಿಸಿ ಅವರ ಆದೇಶದಂತೆ ಸ್ಮಶಾನಕ್ಕೆ ಹೋಗಲು ವಿದ್ಯಾನಗರ ಹಾಗೂ ಸ.ನಂ. 64ರ ಮುಖಾಂತರ ಅಂದಾಜು 3 ಕಿಮೀ ಕ್ರಮಿಸಬೇಕು ಎಂದು ಪೌರಾಯುಕ್ತ ಜಗದೀಶ ಈಟಿ ಪ್ರತಿಭಟನಾಕಾರರಿಗೆ ಸಮಜಾಯಿಷಿ ನೀಡಿದರು. ಆದರೆ, ಕೇವಲ ಅರ್ಧ ಕಿಮೀ ದೂರದಲ್ಲಿರುವ ಸ್ಮಶಾನಕ್ಕೆ ಸುತ್ತುವರಿದು ಯಾಕೆ ಹೋಗಬೇಕು? ಮದನಮಟ್ಟಿ ಗ್ರಾಮದ ರಸ್ತೆಯ ಪಕ್ಕದ ಸರ್ಕಾರಿ ಹಳ್ಳದ ಪಕ್ಕದಲ್ಲಿ ರಸ್ತೆ ಮಾಡಿಕೊಡಿ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.

ಈ ವೇಳೆ ಪೌರಾಯುಕ್ತರು ಮಧ್ಯೆ ಪ್ರವೇಶಿಸಿ, ಹಳ್ಳದ ಝರಿ ನೀರಿನ ಪಕ್ಕದಲ್ಲಿ ಹಾದು ಸ್ಮಶಾನಕ್ಕೆ ಹೋಗಲು ದಾರಿ ಮಾಡಿಕೊಡಲಾಗುವುದು ಎಂದು ಹೇಳಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತದನಂತರ ರಬಕವಿ ಹಳಿಂಗಳಿ ನಾಕಾದ ಪಕ್ಕದಲ್ಲಿರುವ ಹಿಂದು ರುದ್ರಭೂಮಿ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.

ಪ್ರತಿಭಟನೆಯಲ್ಲಿ ಶೇಖರ ಹಳಿಂಗಳಿ, ಮುತ್ತಪ್ಪ ಸಿಕ್ಕಲಗಾರ, ದಶಗೀರ ಸಿಕ್ಕಲಗಾರ, ಬಾಬು ಕಿಲ್ಲೇದಾರ, ಹಣಮಂತ ಸಿಕ್ಕಲಗಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net