

ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಧಾರವಾಡ ಜಿಲ್ಲಾ ವತಿಯಿಂದ ನ. 3 ರಂದು ಬೆಳಗ್ಗೆ 11 ಗಂಟೆಗೆ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ರೈತರ ಪ್ರತಿಭಟನೆ ನಡೆಯಲಿದೆ ಎಂದು ಭಾರತೀಯ ಕಿಸಾನ್ ಸಂಘ ಕರ್ನಾಟಕ ಉತ್ತರ ಪ್ರಾಂತ ಅಧ್ಯಕ್ಷ ವಿವೇಕ ಮೋರೆ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಕೋರ್ಟ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಲಾಗುವುದು. ಈ ಮೂಲಕ ವಿವಿಧ ಬೇಡಿಕೆಗಳಿಗೆ ಆಗ್ರಹಿಸಲಾಗುವುದು ಎಂದರು.
ಪ್ರತಿ ಎಕರೆಗೆ 20 ಸಾವಿರ ರೂ.ಗಳಂತೆ ಬರಪರಿಹಾರವನ್ನು ನೇರವಾಗಿ ರೈತರ ಖಾತೆ ಜಮೆ ಮಾಡಬೇಕು. ಜಾನುವಾರುಗಳಿಗೆ ಸೂಕ್ತವಾದ ಮೇವಿನ ವ್ಯವಸ್ಥೆ ಮಾಡಬೇಕು. ಪ್ರತಿ ದಿನ 9 ತಾಸು ನೀರಾವರಿ ಪಂಪಸೆಟ್ಗಳಿಗೆ ವಿದ್ಯುತ್ ಪೂರೈಸಬೇಕು. ರೈತರ ಹೆಸರಿನಲ್ಲಿರುವ ಎಲ್ಲ ಬ್ಯಾಂಕ್ಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದರು.
ಧಾರವಾಡ ಜಿಲ್ಲಾಧ್ಯಕ್ಷ ಮಂಜುನಾಥ ಗೌರಿ, ಮುಖಂಡರಾದ ಗಂಗಾಧರ ಕಾಸರಘಟ್ಟ, ಪುಟ್ಟಸ್ವಾಮಿ, ರಮೇಶ ಕೊರವಿ, ಗುರುನಾಥ ಬೀರನವರ, ಮಹಾದೇವಪ್ಪ ರಾಯನಾಳ ಸುದ್ದಿಗೋಷ್ಠಿಯಲ್ಲಿದ್ದರು.