ಹುಲಿವಾನ ಗ್ರಾಮದ ಜಮೀನು ದುರಸ್ತಿಗೊಳಿಸಿ: ನಗರದಲ್ಲಿ ಗ್ರಾಮಸ್ಥರ ಪ್ರತಿಭಟನೆ

Protest by Hulivaana villagers Mandya
Published on

ಮಂಡ್ಯ: ತಾಲೂಕಿನ ಹುಲಿವಾನ ಗ್ರಾಮದಲ್ಲಿ ಜಮೀನು ದುರಸ್ತಿ ಮಾಡಿಸಿಕೊಡಬೇಕೆಂದು ಆಗ್ರಹಿಸಿ ನಗರದ ತಹಸೀಲ್ದಾರ್ ಕಚೇರಿ ಎದುರು ಗ್ರಾಮಸ್ಥರು ಮತ್ತು ವಿವಿಧ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದರು.

ಗ್ರಾಮದ ಸ.ನ.44 ಜಮೀನನ್ನು ದುರಸ್ತಿ ಮಾಡಿಸಿಕೊಡುವಂತೆ ಗ್ರೇಟ್-2 ತಹಶೀಲ್ದಾರ್(ಉಪ ತಹಶೀಲ್ದಾರ್) ವಸಂತ್‌ಕುಮಾರ್ ಅವರಿಗೆ ಮನವಿ ನೀಡಿದರು. ಕೆರಗೋಡು ಹೋಬಳಿ ಹುಲಿವಾನ ಗ್ರಾಮದ ಸ.ನಂ.44 ರಲ್ಲಿ ಸುಮಾರು 70 ರಿಂದ 80 ಎಕರೆ ಜಮೀನು ಇದೆ. ಆದರೆ ಅದರಲ್ಲಿ ಕೆಲವರಿಗೆ ಮಾತ್ರ ದುರಸ್ತಿಯಾಗಿರುತ್ತದೆ. ಇನ್ನು ಕೆಲವರಿಗೆ ಸಾಗುವಳಿ ಪತ್ರ ನೀಡಿದ್ದರೂ ದುರಸ್ತಿಯಾಗಿರುವುದಿಲ್ಲ ಎಂದು ಆರೋಪಿಸಿದರು.

ಸ.ನ 44ರಲ್ಲಿ ಪ್ರತಿಯೊಬ್ಬರಿಗೂ ಆರ್‌ಟಿಸಿ ಅವರ ಹೆಸರಿನಲ್ಲಿ ಖಾತೆಯು ನಮೂದಾಗಿರುತ್ತದೆ. ಸುಮಾರು ಹಲವು ವರ್ಷಗಳಿಂದಲೂ ನಮ್ಮ ತಾತ ಮತ್ತು ತಂದೆಯ ಕಾಲದಿಂದಲೂ ಸಹ ಸೇರಿದಂತೆ ಪ್ರಸ್ತುತದಲ್ಲಿಯೂ ಸ್ವಾಧೀನದಲ್ಲಿದ್ದೇವೆ, ಆದ್ದರಿಂದ ದಯಮಾಡಿ ನಮ್ಮ ಸ್ವಾಧೀನದಲ್ಲಿರುವ ಜಮೀನುಗಳನ್ನು ದುರಸ್ತಿ ಮಾಡಿ ಬಡ ಕುಟುಂಬಗಳ ಜೀವನೋಪಾಯಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಮೈಷುಗರ್ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸಾತನೂರು ವೇಣುಗೋಪಾಲ್ ಮಾತನಾಡಿ, ಸ್ವಾಧೀನದಲ್ಲಿರುವ ಜಮೀನನ್ನು ನಮಗೆ ದುರಸ್ತಿ ಮಾಡಿಕೊಡಬೇಕು. ಈ ಜಮೀನನ್ನೇ ನಂಬಿಕೊಂಡಿರುವ ರೈತರಿಗೆ ಸಹಾಯ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಗ್ರಾಮದ ಜನ ಮತ್ತು ಜಾನುವಾರುಗಳ ಜತೆ ಆಗಮಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರ ಧರಣಿ ಹಮ್ಮಿಕೊಳ್ಳುತ್ತೇವೆ. ಅದಕ್ಕೆ ಅವಕಾಶ ನೀಡದೇ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಂಪಹಳ್ಳಿ ಶಿವಶಂಕರ್, ರಮೇಶ್, ಚಿಕ್ಕಣ್ಣ, ಕೃಷ್ಣ, ಸಂದೀಪ್, ನಂಜಯ್ಯ, ರಾಮಚಂದ್ರು, ಮಹೇಂದ್ರ, ಮಲ್ಲಿಕಾರ್ಜುನ್, ಎಚ್.ಪಿ.ರಮೇಶ್, ಶಿವಲಿಂಗು, ಮಾದೇಗೌಡ, ಬೈರೇಗೌಡ, ಬೋರೇಗೌಡ, ಪ್ರಸನ್ನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net