

ಸುಳ್ಯ: ಬಸ್‌ನಲ್ಲಿ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಯುವಕನನ್ನು ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಹಿಂದು ಸಂಘಟನೆಯ ಇಬ್ಬರು ಕಾರ್ಯಕರ್ತರನ್ನು ಬಂಧಿಸಿದ್ದನ್ನು ಆಕ್ಷೇಪಿಸಿ ಹಿಂದು ಸಂಘಟನೆಗಳ ಕಾರ್ಯಕರ್ತರು ಇಂದು ಸುಳ್ಯದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಅಮಾಯಕ ಯುವಕರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಮಂಗಳವಾರ ಬೆಳಗ್ಗೆ ಹಿಂದು ಸಂಘಟನೆಗಳ ಕಾರ್ಯಕರ್ತರು ಸುಳ್ಯ ಪೋಲೀಸ್ ಠಾಣೆಯ ಎದುರಿನ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಬೆಳಗ್ಗೆ ಸುಳ್ಯ ಬಸ್ ನಿಲ್ದಾಣದಲ್ಲಿ ಸೇರಿದ ಹಿಂದು ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಎಬಿವಿಪಿ ಕಾರ್ಯಕರ್ತರು ಮೆರವಣಿಗೆಯ ಮೂಲಕ ಗಾಂಧಿನಗರ ಕಲ್ಕುಡ ದೈವಸ್ಥಾನಕ್ಕೆ ತೆರಳಿದರು. ಅಲ್ಲಿ ವಿಶ್ವ ಹಿಂದು ಪರಿಷತ್ ಸಂಚಾಲಕ ಸೋಮಶೇಖರ ಪೈಕ ಹಾಗೂ ನ.ಪಂ. ಸದಸ್ಯ ವಿನಯ ಕುಮಾರ ಕಂದಡ್ಕ ಸಂಘಟನೆಯ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲಿಸಿದ ಅಧಿಕಾರಿಗಳಿಗೆ ದೈವವೇ ಶಿಕ್ಷೆ ನೀಡಬೇಕು ಎಂದು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅಲ್ಲಿಂದ ಮೆರವಣಿಗೆಯಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಹೋದರು.
ಪೊಲೀಸ್ ಠಾಣೆಯ ಎದುರು ಸೇರಿದ ನಾಯಕರು ಹಾಗೂ ಎಬಿವಿಪಿ ಕಾರ್ಯಕರ್ತರು ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಕಾರ್ಯಕರ್ತರು ಪೊಲೀಸ್ ಠಾಣೆ ಆವರಣ ಪ್ರವೇಶಿಸದಂತೆ ಗೇಟಿಗೆ ಪೋಲೀಸರು ಅಡ್ಡ ನಿಂತಿದ್ದರು. ಕಾರ್ಯಕರ್ತರು ಠಾಣೆಯ ಎದುರಿನ ರಸ್ತೆಯಲ್ಲೇ ಕುಳಿತು ನ್ಯಾಯಕ್ಕಾಗಿ ಆಗ್ರಹಿಸಿದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ತಂಗಿ, ಅಕ್ಕ, ಪತ್ನಿಯ ಮೇಲೆ ಯಾರೋ ಒಬ್ಬ ಕೈ ಹಾಕಿದರೆ ತಕ್ಷಣಕ್ಕೆ ಏನು ಮಾಡುತ್ತೇವೆಯೋ ಅದನ್ನೇ ಕಾರ್ಯಕರ್ತರು ಮಾಡಿದ್ದಾರೆ. ಅಮಾಯಕ ಯುವಕರನ್ನು ಬಂಧಿಸಿದ ಪೊಲೀಸ್ ಸಿಬ್ಬಂದಿ ಕೂಡಲೇ ಎತ್ತಂಗಡಿ ಆಗಬೇಕು ಎಂದರು. ಹಿರಿಯ ಮುಖಂಡ ಎ.ವಿ. ತೀರ್ಥರಾಮ, ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಡಿವೈಎಸ್‌ಪಿ ಅರುಣ್ ನಾಗೇಗೌಡ, ಘಟನೆಯ ಕುರಿತು ಇತ್ತಂಡಗಳ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ನಿಮ್ಮ ಅಹವಾಲುಗಳನ್ನು ಆಲಿಸಿದ್ದು ಈ ಕುರಿತು ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ತಿಳಿಸಿದರು.
ಬಳಿಕ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಹಿಂದೂ ಸಂಘಟನೆಗಳ ಮುಖಂಡರು ಪೊಲೀಸ್ ಠಾಣೆಗೆ ತೆರಳಿ ಮಾತುಕತೆ ನಡೆಸಿದ ಬಳಿಕ ಪ್ರತಿಭಟನೆ ಕೊನೆಗೊಂಡಿತು.
ಪ್ರತಿಭಟನೆಯಲ್ಲಿ ಹಿಂದು ಸಂಘಟನೆಗಳ ಮುಖಂಡರಾದ ನವೀನ್ ನೆರಿಯ, ಹರಿಪ್ರಸಾದ್ ಎಲಿಮಲೆ, ಶಶಿಕಲಾ ನೀರಬಿದಿರೆ, ಶೀಲಾ ಕುರುಂಜಿ, ಕಿಶೋರಿ ಶೇಟ್, ಶಿಲ್ಪಾ ಸುದೇವ್, ಸುಬೋಧ್ ಶೆಟ್ಟಿ ಮೇನಾಲ, ಸಂತೋಷ್ ಕುತ್ತಮೊಟ್ಟೆ, ವಿಕ್ರಮ ಅಡ್ಪಂಗಾಯ, ಎ.ಟಿ. ಕುಸುಮಾಧರ, ಜಗನ್ನಾಥ ಜಯನಗರ, ನಾರಾಯಣ ಶಾಂತಿನಗರ, ಮಹೇಶ ಉಗ್ರಾಣಿಮನೆ, ದಯಾನಂದ ಕುರುಂಜಿ, ಕೇಶವ ಬನ, ಪಿ.ಕೆ. ಉಮೇಶ್, ಹೇಮಂತ್ ಕಂದಡ್ಕ ಮತ್ತಿತರರು ಪಾಲ್ಗೊಂಡಿದ್ದರು.
ಸುಳ್ಯ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯವರ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಹಿಂದು ಸಂಘಟನೆಗೆ ಸೇರಿದ ಯುವಕರನ್ನು ಸೆಕ್ಷನ್ 307ರ ಅಡಿಯಲ್ಲಿ ಬಂಧಿಸಲಾಗಿದ್ದು, ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತ ಯುವಕರನ್ನು ಹಿಂದು ಸಂಘಟನೆ ವರ್ಷಿತ್ ಚೊಕ್ಕಾಡಿ, ಮಿಥುನ್ ಎಂದು ಗುರುತಿಸಲಾಗಿದೆ. ಬಸ್ಸಿನಲ್ಲಿ ಆರೋಪಿ ಯುವಕ ಮೊಹಮ್ಮದ್ ನಿಯಾಝ್ ಎಂಬಾತ ಅನುಚಿತವಾಗಿ ವರ್ತಿಸಿ ಜೀವ ಬೆದರಿಕೆ ನೀಡಿದ್ದಾನೆ ಎಂದು ಆರೋಪಿಸಿದ ಕಾಲೇಜು ವಿದ್ಯಾರ್ಥಿನಿಯ ದೂರನ್ನೂ ಪೊಲೀಸರು ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.