ಪಾಲಿಕೆ ನೌಕರರಿಂದ ಪ್ರತಿಭಟನೆ

hdmc protest
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಜೂನ್ ತಿಂಗಳ ವೇತನ ಪಾವತಿ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೌಕರರು ಗುರುವಾರ ಕರ್ತವ್ಯದಿಂದ ದೂರವುಳಿದು, ಆಯುಕ್ತರ ಕಚೇರಿ ಎದುರು ಹಠಾತ್ ಪ್ರತಿಭಟನೆ ನಡೆಸಿದರು.

7ನೇ ವೇತನ ಆಯೋಗದ ಶೇ. 17ರಷ್ಟು ಮಧ್ಯಂತರ ಪರಿಹಾರವನ್ನು ಜನೆವರಿ ತಿಂಗಳಿಂದ ಇಲ್ಲಿಯವರೆಗೂ ವೇತನದಲ್ಲಿ ಸೇರ್ಪಡೆ ಮಾಡಿಲ್ಲ. 2022ರಿಂದ ನಾಲ್ಕು ತುಟ್ಟಿಭತ್ಯೆ ಏರಿಕೆಯ ವ್ಯತ್ಯಾಸದ ಹಣ ಬಾಕಿ ಉಳಿದಿದೆ. ಜುಲೈ ತಿಂಗಳು ಕಳೆಯುತ್ತ ಬಂದರೂ ಜೂನ್ ತಿಂಗಳ ವೇತನ ಪಾವತಿಸಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬೇಕೇ ಬೇಕು...ನ್ಯಾಯ ಬೇಕು ಎಂದು ಘೊಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಅಟೆಂಡರ್, ಸಿಪಾಯಿ, ಕಚೇರಿ ಸಿಬ್ಬಂದಿ, ಆರೋಗ್ಯ ನಿರೀಕ್ಷಕರು, ಮೇಲ್ವಿಚಾರಕರು, ಕಚೇರಿ ಅಧೀಕ್ಷಕರು ಭಾಗಿಯಾಗಿದ್ದರು. ವಿವಿಧ ವಲಯ ಕಚೇರಿಗಳ ಸಿಬ್ಬಂದಿ ಸಹ ಕರ್ತವ್ಯಕ್ಕೆ ಗೈರಾಗಿದ್ದರು. ಬಹುತೇಕ ಅಧಿಕಾರಿಗಳು ಪ್ರತಿಭಟನೆಯಿಂದ ದೂರ ಉಳಿದಿದ್ದರು.

ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಪ್ರಸಾದ ಪೆರೂರ, ಉಪಾಧ್ಯಕ್ಷ ಕಾಶಿನಾಥ ಜಾಧವ್, ಶ್ರೀನಾಥ ಪವಾರ, ಶಂಕರ ಗಂಗಾವತಿ, ವಿಶ್ವನಾಥ ಪಾಟೀಲ, ಗುರುನಾಥ ತಾಳಿಕೋಟಿ, ಮಹಾಂತೇಶ ಹರಕುಣಿ, ಮಂಜುಳಾ ನಾಟಿಕರ, ಅರುಣಕುಮಾರ, ಇತರರು ಇದ್ದರು.

ರಾಜ್ಯ ಸರ್ಕಾರದಿಂದ ಪ್ರತಿ 3 ತಿಂಗಳಿಗೊಮ್ಮೆ ವೇತನ ಅನುದಾನ ಬಿಡುಗಡೆಯಾಗುತ್ತದೆ. ವಿಳಂಬವಾದಾಗ ಪಾಲಿಕೆಯ ಸಾಮಾನ್ಯ ನಿಧಿಯಿಂದ ವೇತನ ಬಟವಡೆ ಮಾಡಲಾಗುತ್ತದೆ. ಈ ಬಾರಿ ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿ, ವೇತನ ಪಾವತಿ ಮಾಡಬೇಕಾಗಿರುವುದರಿಂದ ವಿಳಂಬವಾಗಿದೆ. ಇಂದು ಅಥವಾ ನಾಳೆ (ಶುಕ್ರವಾರ) ವೇತನ ಪಾವತಿ ಆಗಲಿದೆ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net