ಸರ್ಕಾರಿ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದಿಂದ ಪ್ರತಿಭಟನೆ

SAN_4528
Published on

ಮೈಸೂರು: ರಾಜ್ಯ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರೆಂದು ಪರಿಗಣಿಸಿ ಸೇವಾ ಭದ್ರತೆ ನೀಡಬೇಕೆಂದು ಒತ್ತಾಯಿಸಿ ಮೈಸೂರು ಜಿಲ್ಲೆ ಸರ್ಕಾರಿ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

ಕಂದಾಯ ಇಲಾಖೆಯಲ್ಲಿ ಸುಮಾರು 45 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 10,450 ಗ್ರಾಮ ಸಹಾಯಕರ ಹುದ್ದೆಯನ್ನು 1978ರಲ್ಲಿ ಮಿತವೇತನ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಯಿತು. 2007ರಲ್ಲಿ ಗ್ರಾಮ ಸಹಾಯಕರ ಹುದ್ದೆ ಖಾಯಂ ಆಗಿದೆ. ಆದರೆ, ಯಾವ ಸರ್ಕಾರಗಳೂ ಗ್ರಾಮ ಸಹಾಯಕರಿಗೆ ಸೌಲಭ್ಯ ನೀಡಿಲ್ಲ. 2014ರಲ್ಲಿ ಅಡ್ವೋಕೇಟ್ ಜನರಲ್ ಗ್ರಾಮ ಸಹಾಯಕರನ್ನು ಡಿ ಗ್ರೂಪ್ ನೌಕರರನ್ನಾಗಿ ಮಾಡಲು ಯಾವುದೇ ಕಾನೂನು ತೊಡಕಿಲ್ಲ ಎಂದು ವರದಿ ನೀಡಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಬೆಳಗಾವಿಯ ಸುವರ್ಣಸೌಧದವರೆಗೆ ಪಾದಯಾತ್ರೆ ಮಾಡಿದ್ದ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಶೀಘ್ರದಲ್ಲೇ ಡಿ ಗ್ರೂಪ್ ಸೌಲಭ್ಯ ನೀಡುವ ಭರವಸೆ ನೀಡಿದ್ದರು. ಆದರೆ ಈವರೆಗೂ ಜಾರಿಯಾಗಿಲ್ಲ ಎಂದು ಕಿಡಿ ಕಾರಿದರು.

2024-25ರ ಬಜೆಟ್‌ನಲ್ಲಿ ನಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿಲ್ಲ. ಹೀಗಾಗಿ ನಮಗೆ ಆಗಿರುವ ಅನ್ಯಾಯ ಖಂಡಿಸಿ ಸಿದ್ದರಾಮನಹುಂಡಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಲಾಗಿದೆ. ಫೆ.28ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಸರ್ಕಾರ ಕೂಡಲೇ ಗ್ರಾಮ ಸಹಾಯಕರನ್ನು ಡಿ ಗ್ರೂಪ್ ನೌಕರರನ್ನಾಗಿ ಪರಿಗಣಿಸಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎಂ.ಡಿ.ಬಸವರಾಜು, ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್, ಪದಾಧಿಕಾರಿಗಳಾದ ವಿಜಯ, ರಾಮು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net