ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

03a68e3c-01b1-4a88-84c5-78b6b95d7755
ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ಕೊಡವ ಲ್ಯಾಂಡ್ ಹಕ್ಕೊತ್ತಾಯಕ್ಕಾಗಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
Published on

ಸುಂಟಿಕೊಪ್ಪ: ಕೊಡವ ನ್ಯಾಷನಲ್ ಕೌನ್ಸಿಲ್‌ನಿಂದ ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ಭಾನುವಾರ ಕೊಡವ ಲ್ಯಾಂಡ್ ಹಕ್ಕೊತ್ತಾಯಕ್ಕಾಗಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಸಿಎನ್‌ಸಿ ಸಂಚಾಲಕ ಎನ್.ಯು.ನಾಚಪ್ಪ ಮಾತನಾಡಿ, ಕೊಡವರು ಯಾವುದೇ ಕಾರಣಕ್ಕೂ ಭೂಮಿಯನ್ನು ಮಾರಾಟ ಮಾಡಬಾರದು. ಕೊಡಗಿನ ಭೂಮಿಗಳು ನಮ್ಮ ಪೂರ್ವಿಕರು ಕೃಷಿ ಚಟುವಟಿಕೆ ನಿರ್ವಹಿಸಿಕೊಂಡು ಬಂದ ಭೂಮಿ. ಕೊಡಗಿನ ನೆಲ-ಜಲ, ಸಂಸ್ಕೃತಿಯನ್ನು ಕೊಡವರು ಉಳಿಸಲು ಪಣ ತೊಡಬೇಕು. ಭೂಮಾಫಿಯಾಗಳು, ಪರಿಸರವಾದಿಗಳಿಂದ ಕೊಡವರ ಭೂಮಿ ಪರಭಾರೆಯಾಗುತ್ತಿದೆ. ಇದನ್ನು ತಡೆಗಟ್ಟಬೇಕು. ಕೊಡಗಿನ ಅರಣ್ಯ ನಾಶಕ್ಕೆ ಮೂಲನಿವಾಸಿಗಳು ಕಾರಣರಲ್ಲ, ಬದಲಿಗೆ ಜಾಗತೀಕರಣದ ಹೆಸರಿನಲ್ಲಿ ದೊಡ್ಡ ಕೈಗಾರಿಕೋದ್ಯಮಿಗಳು ಕೊಡಗಿನ ಬೃಹತ್ ಕಾಫಿ ತೋಟ ಖರೀದಿಸಿ ರೇಸಾರ್ಟ್ ಹೋಂಸ್ಟೆಗಳನ್ನು ನಿರ್ಮಿಸಿ ಕಾಂಕ್ರೀಟಿಕರಣಗೊಳಿಸುತ್ತಿರುವುದರಿಂದ ಕೊಡಗಿನಲ್ಲಿ ಭೂಕುಸಿತ, ಜಲಪ್ರಳಯವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ದೇಶದ ಸೇನೆಯಲ್ಲಿ ನಮ್ಮ ಜನಾಂಗದವರೇ ಅತಿ ಹೆಚ್ಚಾಗಿದ್ದರೂ ನಮ್ಮ ಜನಾಂಗವನ್ನು ಕಡೆಗಣಿಸಲಾಗಿದೆ. ಅಲ್ಲದೆ ಕೊಡವರ ಜನ ಸಂಖ್ಯೆ ಆಧಾರದಲ್ಲಿ ಸರ್ಕಾರಗಳು ನೋಡುತ್ತಿರುವ ಹಿನ್ನೆಲೆಯಲ್ಲಿ ಇರುವ ಶಾಸಕರ ಸಂಖ್ಯಾಬಲ ಕಡಿತಗೊಳಿಸಲಾಗಿದೆ. ಜಿಲ್ಲೆಗೆ ದೊರೆಯಬೇಕಾದ ಮಾನ್ಯತೆಗೂ ಕುತ್ತು ಬಂದಿದೆ. ಕೊಡಗು ಪ್ರತ್ಯೇಕ ಸಂಸತ್ ಬೇಕು. ಕೊಡಗಿಗೆ ಸಂಸತ್ ಸದಸ್ಯ ಬೇಡ. ಕೊಡವರಿಗಾಗಿ ಸಂಸತ್ ನಿರ್ಮಾಣವಾಗಬೇಕು. ಜಾತಿ ಗಣತಿ ಸಂದರ್ಭದಲ್ಲಿ ಕೊಡವ ಜನಾಂಗದವರು ಕೊಡವರೆಂದು ಹೆಸರು ಸೇರ್ಪಡೆಗೊಳಿಸುವ ಮೂಲಕ ಜನಸಂಖ್ಯೆಯ ಬಲವನ್ನು ಹೆಚ್ಚಿಸುವಂತೆ ಕರೆ ನೀಡಿದರು.

ಕೊಡವ ಜನಾಂಗದವರನ್ನು ಬುಡಕಟ್ಟು ಮೀಸಲಾತಿಗೆ ಸೇರ್ಪಡೆಗೊಳಿಸಬೇಕೆಂದು ಹೈಕೋರ್ಟ್‌ನಲ್ಲಿ ದಾವೆ ದಾಖಲಿಸಲಾಗಿದೆ ಎಂದೂ ಇದೇ ವೇಳೆ ಉಲ್ಲೇಖಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎಂ.ಎ.ವಸಂತ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕನ್ನಡ ವೃತ್ತದಲ್ಲಿ ಸಿಎನ್‌ಸಿಯ ಪದಾಧಿಕಾರಿಗಳು ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಿದರು. ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಮಾಡಿದ್ದರು.

ಸಿಎನ್‌ಸಿಯ ಸದಸ್ಯರಾದ ಪಿ.ಕೆ.ಮುತ್ತಣ್ಣ, ಎಂ.ಎ.ಉತ್ತಪ್ಪ, ಕೆ.ಜಿ.ಮುತ್ತಣ್ಣ, ಪಿ.ಎನ್.ಬೋಪಣ್ಣ, ಡಿ.ಸಿ.ದೇವಯ್ಯ, ಪುಲ್ಲೇರ ಕಾಳಪ್ಪ ಪಿ.ಎಂ.ರಂಜಿತ್ ಕಾರ್ಯಪ್ಪ ಹಾಗೂ ವಿವಿಧೆಡೆಯಿಂದ ಆಗಮಿಸಿದ್ದ ಕೊಡವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net