ನಾಯಕತ್ವ ಉಳಿಸಿಕೊಳ್ಳಲು ಮಾಜಿ ಶಾಸಕರಿಂದ ಪ್ರತಿಭಟನೆ

Published on

ಮಳವಳ್ಳಿ: ಮಳವಳ್ಳಿ ಕ್ಷೇತ್ರದಲ್ಲಿ ತಮ್ಮ ನಾಯಕತ್ವ ಉಳಿಸಿಕೊಳ್ಳಲು ಮಾಜಿ ಶಾಸಕ ಅನ್ನದಾನಿ ಅವರು ಶಾಸಕ ನರೇಂದ್ರಸ್ವಾಮಿ ವಿರುದ್ಧ ಪ್ರತಿಭಟನೆ ಮಾಡಿಸಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಆರ್.ಎನ್.ವಿಶ್ವಾಸ್ ವ್ಯಂಗ್ಯವಾಡಿದರು.

ಶಾಸಕ ನರೇಂದ್ರಸ್ವಾಮಿ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಆ.24 ರಂದು ಪಟ್ಟಣದಲ್ಲಿ ನಡೆಸಿದ್ದ ಪ್ರತಿಭಟನೆಯನ್ನು ಖಂಡಿಸಿ ಸೋಮವಾರ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಮುಖಂಡರು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕ್ಷೇತ್ರದಲ್ಲಿ ಜೆಡಿಎಸ್‌ನ ಮಾಜಿ ಶಾಸಕರು ಕಾರ್ಯಕರ್ತರ ವಿಶ್ವಾಸ ಕಳೆದುಕೊಂಡಿದ್ದು, ಅಸ್ತಿತ್ವ ಕಾಪಾಡಿಕೊಳ್ಳಲು ಶಾಸಕ ನರೇಂದ್ರಸ್ವಾಮಿ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡಿಕೊಂಡು ಜನರನ್ನು ಪ್ರಚೋದನೆಗೊಳಿಸಿ ಪ್ರತಿಭಟನೆ ಮಾಡಿಸಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ-ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದೇವೆ ಎನ್ನುವವರು ಪ್ರತಿಭಟನೆಯಲ್ಲೇಕೆ ಬಿಜೆಪಿಯ ಒಬ್ಬರೂ ಕಾಣಿಸಿಕೊಂಡಿಲ್ಲ? ಎಂದು ಪ್ರಶ್ನಿಸಿದರು. ನಿಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡುವಲ್ಲಿ ವಿಫಲರಾಗಿರುವ ನೀವು ಕ್ಷೇತ್ರಕ್ಕೆ ನೂರಾರು ಕೋಟಿ ರೂ. ಅನುದಾನದ ಕಾಮಗಾರಿಗಳನ್ನು ನಡೆಸುತ್ತಿರುವ ಶಾಸಕ ನರೇಂದ್ರಸ್ವಾಮಿ ಅವರ ಆಡಳಿತದ ಬಗ್ಗೆ ಪ್ರಶ್ನಿಸುವ ನೈತಿಕತೆ ನಿಮಗಿಲ್ಲವೆಂದು ಕಿಡಿಕಾರಿದರು.
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್ ಪ್ರಮುಖರು ಕೊಮುವಾದಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಮಳವಳ್ಳಿಯಲ್ಲಿ ಪ್ರತಿಭಟನೆ ಮಾಡಿರುವ ಮಾಜಿ ಶಾಸಕ ಕಳೆದ ವಿಧಾನಸಭೆಯ ಸೋಲಿನ ಹತಾಶೆ ಮರೆಮಾಚಲು ಬಾಡಿಗೆ ಪ್ರತಿಭಟನೆ ನಡೆಸಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊಡ್ಡಯ್ಯ, ಸಿ.ಪಿ.ರಾಜು, ಮುಖಂಡರಾದ ಮಾಧು, ಕೆ.ಜೆ.ದೇವರಾಜು, ರಾಮಚಂದ್ರು, ಪುಟ್ಟಬಸವಯ್ಯ, ಬಸವೇಶ್, ಕುಳ್ಳಚನ್ನಂಕಯ್ಯ, ಶಿವಮಾದೇಗೌಡ, ಲಿಂಗರಾಜು, ಶಶಿರಾಜ್, ಕೃಷ್ಣಮೂರ್ತಿ, ಶಾಂತರಾಜು ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net