ವಸತಿ ನಿಲಯದ ಮುಂದೆ ವಿದ್ಯಾರ್ಥಿನಿಯರ ಪ್ರತಿಭಟನೆ

25-05-Shiva-3
ಆಡಳಿತ ಮಂಡಳಿ ಕೋಟಾದಡಿ ಕಾಲೇಜು ಪ್ರವೇಶ ಪಡೆದ ವಿದ್ಯಾರ್ಥಿನಿಯರು ವಸತಿ ನಿಲಯದಿಂದ ಹೊರಹೋಗುವಂತೆ ಸೂಚಿಸಿದ್ದರಿಂದ ರಾಯಚೂರಿನ ಮೆಟ್ರಿಕ್ ನಂತರದ ವೃತ್ತಿಪರ ವಸತಿನಿಲಯದ ವಿದ್ಯಾರ್ಥಿನಿಯರು ವಸತಿ ನಿಲಯದ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
Published on

ರಾಯಚೂರು: ವಸತಿ ನಿಲಯದಿಂದ ಹೊರ ಹೋಗುವಂತೆ ಮೇಲ್ವಿಚಾರಕಿ ಸೂಚನೆ ನೀಡಿರುವುದನ್ನು ಖಂಡಿಸಿ ನಗರದ ಮೆಟ್ರಿಕ್ ನಂತರದ ವೃತ್ತಿ ಪರ ಕೋರ್ಸ್‌ಗಳ ವಸತಿ ನಿಲಯದ ವಿದ್ಯಾರ್ಥಿನಿಯರು ಶನಿವಾರ ವಸತಿ ನಿಲಯದ ಮುಂದೆ ಪ್ರತಿಭಟನೆ ನಡೆಸಿದರು.
ಆಡಳಿತ ಮಂಡಳಿ ಕೋಟಾದಡಿ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿನಿಯರು ವಸತಿ ನಿಲಯದಿಂದ ಹೊರಹೊಗುವಂತೆ ನಾಲ್ಕು ದಿನಗಳ ಹಿಂದೆ ಮೇಲ್ವಿಚಾರಕಿ ಆದೇಶ ಹೊರಡಿಸಿದ್ದಾರೆ. ಇದರಿಂದ ನೂರಾರು ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗುವಂತಾಗಲಿದೆ.
ಹಲವಾರು ವಿದ್ಯಾರ್ಥಿನಿಯರು ಪ್ಯಾರಾ ಮೆಡಿಕಲ್, ಐಟಿಐ, ನರ್ಸಿಂಗ್ ಸೇರಿದಂತೆ ಹಲವಾರು ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆದಿದ್ದಾರೆ. ವಸತಿ ನಿಲಯಗಳಲ್ಲಿ ಭೋಜನಾ ವೆಚ್ಚ ಸೇರಿದಂತೆ ಇನ್ನಿತರ ವೆಚ್ಚಗಳನ್ನು ಮರು ಹೊಂದಾಣಿಕೆ ಮಾಡಿಕೊಂಡು ವಸತಿ ನಿಲಯದಲ್ಲಿ ಇರಲು ಅವಕಾಶ ಮಾಡಿಕೊಟ್ಟಿತ್ತು.
ಆದರೆ ಆಡಳಿತ ಮಂಡಳಿ ಕೋಟಾದಡಿ ಕಾಲೇಜು ಪ್ರವೇಶ ಪಡೆದ ವಿದ್ಯಾರ್ಥಿನಿಯರು ಶಿಷ್ಯ ವೇತನ ಯೋಜನೆಗೆ ಅರ್ಹರಲ್ಲ ಎಂದು ತಿಳಿಸಿದ್ದರಿಂದ ವಿದ್ಯಾರ್ಥಿನಿಯರನ್ನು ವಸತಿನಿಲಯಗಳನ್ನು ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ.
ಇಲಾಖೆ ಆದೇಶವನ್ನು ರದ್ದುಗೊಳಿಸಿ ಆಡಳಿತ ಮಂಡಳಿ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿರಲು ಅವಕಾಶ ನೀಡಿ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಬೇಕು ಎಂದು ವಿದ್ಯಾರ್ಥಿನಿಯರು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net