ರೈತಸಂಘ, ಹಸಿರು ಸೇನೆಯಿಂದ ಪ್ರತಿಭಟನೆ

30M.D.R.2
ಮದ್ದೂರು ತಾಲೂಕಿನ ಬೆಸಗರಹಳ್ಳಿ ಹಾಗೂ ಕೊಪ್ಪ ಹೋಬಳಿಯ ಕೊನೇ ಭಾಗದ ಗ್ರಾಮಗಳಿಗೆ ವಿಶ್ವೇಶ್ವರಯ್ಯ ನಾಲೆಯ ಮೂಲಕ ನೀರು ಹರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಏಕೀಕರಣ ಸಮಿತಿ ವತಿಯಿಂದ ಬೆಸಗರಹಳ್ಳಿ ಅಡ್ಡ ರಸ್ತೆಯಲ್ಲಿ ಎತ್ತಿನಗಾಡಿ ಸಮೇತ ಜಾನುವಾರುಗಳನ್ನು ಕರೆತಂದು ಪ್ರತಿಭಟನೆ ಮಾಡಿದ ನಂತರ ಕಾವೇರಿ ನೀರಾವರಿ ಇಲಾಖೆಯ ಕಾರ್ಯನಿರ್ವಹಕ ಅಭಿಯಂತರ ನಂಜುಂಡೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು. ನಂಜುಂಡಯ್ಯ, ಸೊ.ಸಿ.ಪ್ರಕಾಶ್, ಪ್ರಭುಲಿಂಗು, ವೆಂಕಟೇಶ್, ರಾಮೇಗೌಡ, ಮರಿಲಿಂಗ, ದಿನೇಶ್, ಶಿವರಾಮು, ಚನ್ನಪ್ಪ ಇದ್ದರು.
Published on

ಮದ್ದೂರು: ಬೆಸಗರಹಳ್ಳಿ ಹಾಗೂ ಕೊಪ್ಪ ಹೋಬಳಿಯ ಕೊನೇ ಭಾಗದ ಗ್ರಾಮಗಳಿಗೆ ವಿಶ್ವೇಶ್ವರಯ್ಯ ನಾಲೆಯ ಮೂಲಕ ನೀರು ಹರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಏಕೀಕರಣ ಸಮಿತಿ ವತಿಯಿಂದ ಬೆಸಗರಹಳ್ಳಿ ಅಡ್ಡ ರಸ್ತೆಯಲ್ಲಿ ಗುರುವಾರ ಪ್ರತಿಭಟನೆ ಮಾಡಲಾಯಿತು.

ರಸ್ತೆಗೆ ಜಾನುವಾರುಗಳ ಸಮೇತ ಎತ್ತಿನಗಾಡಿಗಳು ಹಾಗೂ ಟ್ರ್ಯಾಕ್ಟರ್‌ಗಳನ್ನು ತಂದು ಒಂದು ಗಂಟೆಗೂ ಅಧಿಕ ಕಾಲ ಮದ್ದೂರು ಕೊಪ್ಪ ಮಾರ್ಗದ ರಸ್ತೆ ಸಂಚಾರ ತಡೆದು ನೀರು ಹರಿಸದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ರೈತ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ಬೆಸಗರಹಳ್ಳಿಯ ಕೊನೇ ಭಾಗ ಹಾಗೂ ಕೊಪ್ಪ ಕೊನೆಯ ಭಾಗಕ್ಕೆ ವಿಶ್ವೇಶ್ವರಯ್ಯ ನಾಲೆಯ ಮೂಲಕ ನೀರು ತಲುಪದಿರುವ ಕಾರಣ ಬೆಳೆಗಳು ಹಾಗೂ ತೆಂಗಿನ ಮರಗಳು ಒಣಗುತ್ತಿದೆ. ಶೀಘ್ರವಾಗಿ ನೀರು ಹರಿಸದೆ ಹೋದರೆ ಬೆಳೆಗಳು ಸಂಪೂರ್ಣವಾಗಿ ಒಣಗಿ ರೈತರಿಗೆ ಹೆಚ್ಚಿನ ಮಟ್ಟದಲ್ಲಿ ಆರ್ಥಿಕ ನಷ್ಟ ಉಂಟಾಗಲಿದೆ. ಆದ್ದರಿಂದ ಅಧಿಕಾರಿಗಳು ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಮಾಡಿದರು.

ನೀರು ಹರಿಸಲು ಕ್ರಮ:

ಕಾವೇರಿ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ನಂಜುಂಡೇಗೌಡ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿ, ಮಗು ನಾಲೆಗೆ ಬಿದ್ದಿದ್ದ ಕಾರಣ ನೀರನ್ನು ನಿಲ್ಲಿಸಲಾಗಿತ್ತೇ ವಿನಾ ಬೇರೆ ಯಾವ ಕಾರಣದಿಂದಲ್ಲ. ಇಂದಿನಿಂದಲೇ ನಾಲೆಗಳಿಗೆ ನೀರನ್ನು ಬಿಡುತ್ತಿದ್ದೇವೆ. ಶುಕ್ರವಾರ ಬೆಸಗರಹಳ್ಳಿ ಹಾಗೂ ಕೊಪ್ಪದ ಕೊನೇ ಭಾಗಕ್ಕೆ ನೀರು ತಲುಪುವ ತನಕ ನೀರು ಹರಿಸುತ್ತೇವೆ ಎಂದು ಭರವಸೆ ನೀಡಿದರು. ತದನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಸೊ.ಸಿ.ಪ್ರಕಾಶ್, ಪ್ರಭುಲಿಂಗು, ವೆಂಕಟೇಶ್, ರಾಮೇಗೌಡ, ಮರಿಲಿಂಗ, ದಿನೇಶ್, ಶಿವರಾಮು, ಚನ್ನಪ್ಪ, ಮರಿಲಿಂಗು, ಲಿಂಗರಾಜು, ಯೋಗಾನಂದ, ಕೃಷ್ಣ, ಉಮೇಶ್, ರಾಮಕೃಷ್ಣಯ್ಯ, ರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net