

ಮಂಡ್ಯ: ವಿಶ್ವೇಶ್ವರಯ್ಯ ನಾಲೆ ಲೋಕಸರ ಶಾಖೆಯ ಕೊನೆಯ ಅಚ್ಚುಕಟ್ಟು ಭಾಗ, ಮದ್ದೂರು ಹಾಗೂ ಮಳವಳ್ಳಿ ತಾಲೂಕಿನ ಕೊನೇ ಭಾಗದ ಜಮೀನಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಧರಣಿ ನಡೆಸಿದ ರೈತರು, ಘೋಷಣೆ ಕೂಗಿದರು. ಕೊನೆ ಭಾಗದ ನಾಲೆಗಳಿಗೆ ನೀರು ಹರಿಸದ ಪರಿಣಾಮ ರೈತರಿಗೆ ಸಮಸ್ಯೆಯಾಗುತ್ತಿದೆ. ಅಧಿಕಾರಿಗಳು ಈಗ ನಾಲೆ ಅಭಿವೃದ್ಧಿ ಕಾಮಗಾರಿ ಮಾಡುತ್ತಿದ್ದಾರೆ. ಮಳೆಯ ವೇಳೆಯಲ್ಲಿ ನಾಟಿ ಮಾಡದಿದ್ದರೆ ಭತ್ತ ಬೆಳೆಯಲಾಗುವುದಿಲ್ಲ. ಭತ್ತದ ಪೈರು ಚಳಿಗೆ ಸಿಲುಕಿ ಒಡೆ ಸರಿಯಾಗಿ ಬರಲ್ಲ. ಈ ಕನಿಷ್ಟ ಜ್ಞಾನ ಅಧಿಕಾರಿಗಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಮದ್ದೂರು, ಮಳವಳ್ಳಿ ತಾಲೂಕಿಗೆ ನೀರು ಹರಿಸುವಂತೆ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ರಘುರಾಂ ಅವರ ಮನವಿ ಮಾಡಿಕೊಳ್ಳಲಾಗುತ್ತಿದೆ. ಬೆಳೆ ಬೆಳೆದ ನಂತರ ಕಾಮಗಾರಿ ಮಾಡಿ, ಈಗ ನೀರು ಹರಿಸುವಂತೆ ಹೇಳಿದರೂ ಇನ್ನೂ ಹರಿಸಿಲ್ಲ. ಅವರಿಗೆ ಯಾರ ಒತ್ತಡವೋ ಏನೋ ಗೊತ್ತಿಲ್ಲ, ಕಾಮಗಾರಿ ಆರಂಭಿಸಿದ್ದಾರೆ ಎಂದು ಕಿಡಿಕಾರಿದರು.
ನಾಲೆಯಲ್ಲಿ ಜೋರಾಗಿ ನೀರು ಕೊಡದಿದ್ದರೆ ಕೊನೆಯ ಭಾಗಕ್ಕೆ ಹರಿಯುವುದಿಲ್ಲ. ನಾಟಿ ಮಾಡಲು ಆಗಲ್ಲ, ನಾಟಿ ಮಾಡಲಿಲ್ಲ ಎಂದರೆ ಸಂಪೂರ್ಣ ಬೆಳೆ ನಾಶ ಆಗುತ್ತದೆ. ರೈತರು ಮಾಡಿರುವ ಖರ್ಚು ಸಹ ನಷ್ಟ ಆಗುತ್ತದೆ. ನೀರು ಬಿಡುವುದಾಗಿ ಭರವಸೆ ನೀಡಿದರೆ ಚಳವಳಿ ವಾಪಸ್ ಪಡೆಯುತ್ತೇವೆ. ಇಲ್ಲವಾದಲ್ಲಿ ಅನಿರ್ದಿಷ್ಟಾವಧಿ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದರು.
ಚಳವಳಿಯಲ್ಲಿ 80 ವರ್ಷ ವಯಸ್ಸಾದ ರೈತರು ಸಹ ಭಾಗವಹಿಸಿದ್ದಾರೆ. ನೀರಾವರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಕನಿಷ್ಟ ಜ್ಞಾನ ಬೇಡವೇ?. ಸಚಿವರು, ಶಾಸಕರು ನೀರು ಬಿಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಮದ್ದೂರು ಮತ್ತು ಮಳವಳ್ಳಿ ಶಾಸಕರು ನೀರು ಬಿಟ್ಟಿರುವುದನ್ನು ತೋರಿಸಲಿ. ಕಾಮಗಾರಿ ನಿಲ್ಲಿಸಿ ನೀರು ಬಿಡಲಿ, ನೀರು ನಿಲ್ಲಿಸಿದ ನಂತರ ಕಾಮಗಾರಿ ಮಾಡಲಿ. ದೊಡ್ಡ ದೊಡ್ಡ ನಾಲೆಗಳನ್ನು ಬೇಗ ಮಾಡಿದ್ದಾರೆ. ಸಣ್ಣ ಕಾಲುವೆಗಳನ್ನು 15 ದಿನಗಳಲ್ಲಿ ಕಾಮಗಾರಿ ಮುಗಿಸಬಹುದಾಗಿದೆ. ಆದರೆ, ಬೇಕಂತಲೇ ತಡ ಮಾಡುತ್ತಿದ್ದಾರೆ. ರೈತರ ಜೀವ ತೆಗೆಯಲು ಅಧಿಕಾರಿಗಳು, ಜನಪ್ರತಿನಿಧಿಗಳು ನಿಂತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಖಜಾಂಚಿ ರವಿಕುಮಾರ್, ಬೋರಾಪುರ ಶಂಕರೇಗೌಡ, ಮದ್ದೂರು ತಾಲೂಕು ಅಧ್ಯಕ್ಷ ಉಮೇಶ್, ವಿನೋದ್, ಬಾಬು, ಶಂಭೂಗೌಡ, ಲಿಂಗಪ್ಪಾಜಿ, ಪಟೇಲ್ ಬೋರೇಗೌಡ, ಶಿವಲಿಂಗೇಗೌಡ, ಬೋಮ್ಮಲಿಂಗೇಗೌಡ, ನಾಗಲಿಂಗು, ಚಿಕ್ಕಮರಿಗೌಡ ಇತರರಿದ್ದರು.