

ನಂಜನಗೂಡು: ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಹರಿದು ಅಪಮಾನ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಆಗ್ರಹಿಸಿ ಗುರುವಾರ ತಾಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರೈತ ಸಂಘಟನೆಯ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಜಮಾವಣೆಗೊಂಡು, ಪ್ಲೆಕ್ಸ್ ಹರಿದು ಹಾಕಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಘೋಷಣೆ ಕೂಗಿದರು.
ತಾಲೂಕು ಅಧ್ಯಕ್ಷ ಸತೀಶ್ ರಾವ್ ಮಾತನಾಡಿ, ಮೈಸೂರು ತಾಲೂಕಿನ ವಾಜಮಂಗಲ ಗ್ರಾಮದಲ್ಲಿ ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇರುವ ಫ್ಲೆಕ್ಸ್‌ಗಳನ್ನು ಕಿತ್ತುಹಾಕಿ, ಕತ್ತರಿಯಿಂದ ಕತ್ತರಿಸಿ ಹೇಯ ಕೃತ್ಯ ಎಸಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವ ಕ್ಷೇತ್ರದಲ್ಲಿ ಇಂತಹ ಘಟನೆ ನಡೆಯಬಾರದಾಗಿತ್ತು. ಆದರೂ ನಡೆದು ಹೋಗಿದ್ದು, ಕಿಡಿಗೇಡಿಗಳನ್ನು ಶೀಘ್ರದಲ್ಲಿ ಪತ್ತೆ ಹಚ್ಚಿ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಅಲ್ಲದೆ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸಿದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು. ಬಳಿಕ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘದ ತಾಲೂಕು ಉಪಾಧ್ಯಕ್ಷ ನಂಜುಂಡೇಗೌಡ, ಶ್ವೇತಾ, ಮಹದೇವನಾಯಕ, ಕೃಷ್ಣ, ಮಧು, ಅಂಕಣ್ಣ, ತಿಮ್ಮನಾಯಕ, ಸುರೇಶ್ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಇದ್ದರು.