ಕೇಂದ್ರ ಸರ್ಕಾರ ವಿರುದ್ಧ ಮಾ.12 ರಂದು ರೈತರಿಂದ ಪಂಜಿನ ಪ್ರತಿಭಟನಾ ಮೆರವಣಿಗೆ

kuruburu shanthakumar
Published on

ಮೈಸೂರು: ಕನಿಷ್ಠ ಬೆಂಬಲ ಬೆಲೆ ಖಾತ್ರಿಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟವನ್ನು ಪೊಲೀಸ್ ಬಲದ ಮೂಲಕ ಹತ್ತಿಕ್ಕಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದ್ದು, ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಮಾ.12 ರಂದು ರಾಜ್ಯಾದ್ಯಂತ ರೈತ ಸಂಘಟನೆಗಳಿಂದ ಪಂಜಿನ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ಪಂಜಾಬ್, ಹರಿಯಾಣ ರೈತರು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗಾಗಿ ಪ್ರಬಲ ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ರೈತರ ಹೋರಾಟವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ರೈತರೊಂದಿಗೆ ಸಭೆ ನಡೆಸಿ ಬೇಡಿಕೆ ಈಡೇರಿಸುವ ನಾಟಕವಾಡಿದ ಕೇಂದ್ರ ಸರ್ಕಾರ ಮತ್ತೊಂದೆಡೆ ಪೊಲೀಸರ ಮೂಲಕ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ರೈತರ ಹೋರಾಟವನ್ನು ತೀವ್ರಗೊಳಿಸಲು ಮಾ.15 ರಂದು ಧಾರವಾಡದಲ್ಲಿ ರೈತರು ಟ್ರಾೃಕ್ಟರ್ ರ‌್ಯಾಲಿ ನಡೆಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ರಾಜ್ಯಾದ್ಯಂತ ಬರಗಾಲದ ಬವಣೆಯಿಂದ ಕುಡಿಯುವ ನೀರು, ದನಕರುಗಳಿಗೆ ಮೇವು ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಸರ್ಕಾರ ಕೂಡಲೇ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕು. ರಾಜ್ಯದಲ್ಲಿ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ರೈತರಿಂದ ಸಾಲ ವಸೂಲಾತಿ ನಿಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದರು ಬ್ಯಾಂಕ್‌ಗಳು ಬಲವಂತವಾಗಿ ಸಾಲ ವಸೂಲಾತಿ ಮಾಡುತ್ತಿದೆ. ಬ್ಯಾಂಕ್‌ಗಳು ಬಲವಂತವಾಗಿ ಸಾಲ ವಸೂಲಾತಿ ಮುಂದುವರೆಸಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ದೇಶಕ್ಕೆ ಅಗತ್ಯವಿಲ್ಲದೆ ಇದ್ದರೂ ಹೊರ ದೇಶದಿಂದ ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ನೀತಿಯನ್ನು ನಾವು ಇತ್ತೀಚೆಗೆ ಅಬುದಾಬಿಯಲ್ಲಿ ವಿಶ್ವ ವ್ಯಾಪಾರ ಸಂಸ್ಥೆಯ ಸಭೆಯಲ್ಲಿ ವಿರೋಧಿಸಿದೆವು. ನಮ್ಮಂತೆ ಹಲವು ದೇಶಗಳ ರೈತ ಪ್ರತಿನಿಧಿಗಳು ಒಪ್ಪಂದವನ್ನು ವಿರೋಧಿಸಿದೆವು. ನಮ್ಮ ದೇಶದ ರೈತರ ಹೋರಾಟವನ್ನು ಪರಿಗಣಿಸಿ ಕೇಂದ್ರ ಸರ್ಕಾರ ಕೂಡ ಒಪ್ಪಂದವನ್ನು ವಿರೋಧಿಸಿತು. ಈ ಹಿನ್ನಲೆಯಲ್ಲಿ ಒಪ್ಪಂದಕ್ಕೆ ತೆರೆಬಿದ್ದಿದ್ದು, ಇದರಿಂದ ಅನಾವಶ್ಯಕವಾಗಿ ಹೆಚ್ಚುವರಿ ವಿದೇಶದಿಂದ ಆಮದಾಗುವ ಕೃಷಿ ಉತ್ಪನ್ನಗಳಿಗೆ ಕಡಿವಾಣ ಬೀಳಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಬರಡನಪುರ ನಾಗರಾಜ್, ನೀಲಕಂಠಪ್ಪ, ಲಕ್ಷ್ಮೀಪುರ ವೆಂಕಟೇಶ್, ದೇವನೂರು ವಿಜಯೇಂದ್ರ, ರಂಗರಾಜು, ಅಂಬಳೆ ಮಂಜುನಾಥ, ಸುನಿಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net