ಮೈಸೂರಿನಲ್ಲಿ ರೈತರಿಂದ ಪ್ರತಿಭಟನೆ

WhatsApp Image 2025-08-19 at 4.40.27 PM
Published on

ಮೈಸೂರು: ರೈತರ ಸಮಸ್ಯೆ ಬಗೆಹರಿಸುವಂತೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರಸಕ್ತ ಸಾಲಿಗೆ ಕೇಂದ್ರ ಸರ್ಕಾರ ಒಂದು ಟನ್ ಕಬ್ಬಿಗೆ 3550 ರೂ. ನಿಗದಿ ಮಾಡಿದೆ. 2025-2026ನೇ ಸಾಲಿಗೆ ಕಬ್ಬಿನ ಎಫ್‌ಆರ್‌ಪಿ ದರಕ್ಕೆ ಹೆಚ್ಚುವರಿಯಾಗಿ ರಾಜ್ಯ ಸಲಹಾ ಬೆಲೆ ಎಸ್‌ಎಪಿ ದರ ಏರಿಕೆ ಮಾಡಿ ಟನ್‌ಗೆ 4500 ರೂ.ನಿಗದಿ ಪಡಿಸಬೇಕು ಎಂದು ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಒತ್ತಾಯಿಸಿದರು.

ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ಕಳೆದ ವರ್ಷದ ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡಿಸಿ ಕೊಡಿಸಬೇಕು, ಎಫ್‌ಆರ್‌ಪಿ ದರ ಪುನರ್ ಪರಿಶೀಲನೆ ಮಾಡಿ ಸಿಎಸಿಪಿ ವರದಿಯಂತೆ ಪ್ರತಿ ಟನ್ ಕಬ್ಬಿಗೆ ರೈತನ ಹೊಲದಲ್ಲಿನ ದರ ಟನ್‌ಗೆ 4500 ರೂ. ಬೆಲೆ ನಿಗದಿ ಪಡಿಸಬೇಕು ಎಂದು ಆಗ್ರಹಿಸಿದರು.

ಕಳೆದ ವರ್ಷ 2023-2024 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಟನ್‌ಗೆ 150 ರೂ ಬೆಲೆ ನಿಗದಿ ಪಡಿಸಿದ್ದು, ಕಾರ್ಖಾನೆಗಳು ಇನ್ನು ಕೊಟ್ಟಿಲ್ಲ. ಅದಕ್ಕೆ ಬಡ್ಡಿ ಸೇರಿಸಿ ತಕ್ಷಣವೇ ಬಾಕಿ ಹಣ ಕೊಡಿಸಬೇಕು. ಕಬ್ಬಿನ ಎಫ್‌ಆರ್‌ಪಿ ದರ ರೈತನ ಹೊಲದಲ್ಲಿನ ದರ ಎಂದು ಬದಲಾಗಬೇಕು. ಬಣ್ಣಾರಿ ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರೆ ಇಳುವರಿ ಮೋಸ ತಪ್ಪಿಸಲು ಇಳುವರಿ ಮಿತಿ ಕನಿಷ್ಠ ಶೇ.9ಕ್ಕೆ ನಿಗದಿ ಆಗಬೇಕು ಎಂದು ಆಗ್ರಹಿಸಿದರು.

ಕಬ್ಬಿನ ತೂಕದಲ್ಲಿ ಮೋಸ ತಪ್ಪಿಸಲು ಕಾರ್ಖಾನೆಗಳ ಮುಂದೆ ಸರ್ಕಾರದಿಂದ ತೂಕದ ಯಂತ್ರ ಸ್ಥಾಪಿಸಬೇಕು. ಜಿಲ್ಲೆಯಲ್ಲಿ ಭತ್ತದ ಬೆಳೆ ಹೆಚ್ಚು ನಾಟಿ ಮಾಡಿದ್ದು ಯೂರಿಯಾ ರಸ ಗೊಬ್ಬರದ ಅವಶ್ಯಕತೆ ಹೆಚ್ಚು ಇದ್ದು ರೈತರಿಗೆ ಸಮಸ್ಯೆಯಾಗದಂತೆ ಮುಕ್ತವಾಗಿ ಸಿಗಲು ತುರ್ತು ಅಗತ್ಯ ಕ್ರಮ ಕೈಗೊಳ್ಳಬೇಕು. ತಾಲೂಕಿನ ಕಡಕೋಳ ಗ್ರಾಮದಿಂದ ವಾಜಮಂಗಲಕ್ಕೆ ಹೋಗುವ ಐನ್ಶನ್ ವೈರ್ ಹಾದು ಹೋಗುತ್ತಿದ್ದು ಇದರಿಂದ ರೈತರು ಜಮೀನು ಕಳೆದುಕೊಳ್ಳುತ್ತಿದ್ದು, ಬಹುತೇಕ ರೈತರು ತುಂಡು ಭೂಮಿ ಹೊಂದಿದ್ದು ಜೀವನಕ್ಕೆ ಇದೇ ಆಧಾರವಾಗಿದೆ. ರೈತರಿಗೆ ಪರ್ಯಾಯವಾಗಿ ಭೂಮಿ ನೀಡಬೇಕು ಅಥವಾ ಶಾಶ್ವತ ನ್ಯಾಯಯುತ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ರೇಖಾ ಮಾತನಾಡಿ, ರೈತರು ನೀಡಿದ್ದ ಒತ್ತಾಯ ಪತ್ರವನ್ನು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದು ಸಮಸ್ಯೆಯನ್ನು ಬಗ್ಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದರು.

ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಪಿ. ಸೋಮಶೇಖರ್, ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ, ಲಕ್ಷ್ಮೀಪುರ ವೆಂಕಟೇಶ್, ದೇವನೂರು ವಿಜಯೇಂದ್ರ, ವರಕೋಡು ನಾಗೇಶ್, ಕೆಂಡಗಣಪ್ಪ, ಬನ್ನೂರು ಸೂರಿ, ವಾಜಮಂಗಲ ಮಹದೇವು, ಕಾಟೂರು ಮಹದೇವಸ್ವಾಮಿ, ಕಾಟೂರು ನಾಗೇಶ್, ಕೊಡನಹಳ್ಳಿ ಸೋಮಣ್ಣ,ಅಂಬಳೆ ಮಂಜುನಾಥ್, ದೇವನೂರು ಮಹದೇವಸ್ವಾಮಿ, ಸಾತಗಳ್ಳಿ ಬಸವರಾಜ್, ಕೂರ್ಗಳ್ಳಿ ರವಿಕುಮಾರ್, ಪಿ.ನಾಗೇಂದ್ರ, ಮಾರ್ಬಳ್ಳಿ ಬಸವರಾಜ, ಸಿದ್ಧರಾಮ, ನಂಜುಂಡಸ್ವಾಮಿ, ಗಣೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net