ಕಾರಜೋಳದಲ್ಲಿ ರೈತರಿಂದ ಪ್ರತಿಭಟನೆ

Protest by farmers in Karajola
ಕಾರಜೋಳದ ಬಸವೇಶ್ವರ ಸಕ್ಕರೆ ಕಾರ್ಖಾನೆ ಎದುರು ರೈತರು ಪ್ರತಿಭಟನೆ ನಡೆಸಿದರು. ಸಂಗಮೇಶ ಸಗರ, ಸೋಮು ಬಿರಾದಾರ, ಶಶಿಕಾಂತ ಬಿರಾದಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಕಬ್ಬಿನ ಬಿಲ್ ಪಾವತಿಸದ ಸಕ್ಕರೆ ಕಾರ್ಖಾನೆ ವಿರುದ್ಧ ಆಕ್ರೋಶ ಹೊರಹಾಕಿದ ರೈತರು ಬುಧವಾರ ಕಾರಜೋಳದ ಬಸವೇಶ್ವರ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕಬ್ಬು ಬೆಳೆಗಾರರ ಒಕ್ಕೂಟದ ನೇತೃತ್ವ ಪ್ರತಿಭಟನೆ ನಡೆಸಿದ ರೈತರು ಕೂಡಲೇ ಬಿಲ್ ಪಾವತಿಸಬೇಕೆಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, 2022-2023ನೇ ಸಾಲಿನ ಕಬ್ಬಿನ ಬಿಲ್ ಈವರೆಗೂ ರೈತರ ಖಾತೆಗೆ ಜಮೆ ಆಗಿಲ್ಲ. ಕಬ್ಬ ಪೂರೈಸಿದ 15 ದಿನಗಳಲ್ಲಿ ಬಿಲ್ ಪಾವತಿಸಬೇಕೆಂದು ಸರ್ಕಾರದ ಮಾರ್ಗಸೂಚಿ ಇದ್ದರೂ ಕಾರ್ಖಾನೆ ಮಾಲೀಕರು ಈವರೆಗೂ ಬಿಲ್ ಪಾವತಿಸಿಲ್ಲ. ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಿರುವ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ವ್ಯವಸ್ಥಾಪಕರಿಗೆ ನಾಚಿಕೆಯಾಗಬೇಕು. ಈ ಕೂಡಲೇ ರೈತರ ಖಾತೆಗೆ ಬಿಲ್ ಸಂದಾಯ ಮಾಡಬೇಕು. ಇಲ್ಲವಾದಲ್ಲಿ ಸಮಸ್ತ ರೈತರೊಡಗೂಡಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಕೋಲಾರ ತಾಲೂಕಾಧ್ಯಕ್ಷ ಸೋಮು ಬಿರಾದಾರ ಹಾಗೂ ಶಶಿಕಾಂತ ಬಿರಾದಾರ ಮಾತನಾಡಿ, ಕಳೆದ 6-7 ತಿಂಗಳ ಹಿಂದೆ ಕಳುಹಿಸಿರುವ ಕಬ್ಬಿನ ಬಾಕಿ ಇನ್ನೂ ರೈತರಿಗೆ ಹಾಕಿಲ್ಲ, ಇದರಿಂದ ರೈತರಿಗೆ ತುಂಬಾ ಸಮಸ್ಯೆಗಳಾಗುತ್ತಿವೆ. ಜೂನ್ ಪ್ರಾರಂಭವಾದರೂ ಬೀತನೆಗೆ ಬೀಜ, ಗೊಬ್ಬರ ತರಬೇಕಾದರೆ ಹಣ ಇರದೇ ಸಮಸ್ಯೆ ಎದುರಿಸುವಂತಾಗಿದೆ, ರೈತರ ಮನೆಯಲ್ಲಿ ಮದುವೆಯಂತಹ ಶುಭಕಾರ್ಯ ಮಾಡಬೇಕಾದರೂ ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಈ ಕೂಡಲೇ ಬಿಲ್ ಹಾಕಬೇಕು ಎಂದು ಆಗ್ರಹಿಸಿದರು.

ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಇ. ದಯಾಳನ್ ಜೂ. 18ರೊಳಗೆ ಸಂಪೂರ್ಣ ಬಿಲ್ ನೀಡುವುದಾಗಿ ಲಿಖಿತ ರೂಪದಲ್ಲಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ರೈತ ಮುಖಂಡರಾದ ಬಸ್ಸು ನ್ಯಾಮಗೊಂಡ, ಶ್ರೀಶೈಲ ಬಾಡಗಿ, ಸತ್ಯಪ್ಪ ಕುಳ್ಳೋಳ್ಳಿ, ರಾಜು ಚಲವಾದಿ, ಪರಶು ಮಾದರ, ಶ್ರೀಶೈಲ ಕೋಲಾರ, ರವಿಕಾಂತ ಪಾಟೀಲ, ಸಂಗನಗೌಡ ಬಿರಾದಾರ, ಮಲ್ಲು ಮಾಚಕನೂರ, ರಾಘು ಯರನಾಳ, ಮಲ್ಲಿಕಾರ್ಜುನ ರಡ್ಡೇರ, ಪ್ರಶಾಂತ ಸೊನ್ನದ, ಗೋಪಾಲ ಕಾಖಂಡಕಿ, ಅಪ್ಪಾಸಾಹೇಬ ಲಚಮ್ಮಣವರ, ವಿವೇಕಾನಂದ ಹಿರೇಮಠ, ಮಹೇಶ ಬೆಳ್ಳುಬ್ಬಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net