

ಬ್ಯಾಡಗಿ: ತಾಲೂಕಿನ ರೈತರಿಗೆ 2022-23ನೇ ಸಾಲಿನಲ್ಲಿ ತುಂಬಿದ ಬೆಳೆ ವಿಮೆ ವಿತರಣೆ ಹಾಗೂ ಬೆಳೆ ನಷ್ಟ ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಕಚೇರಿ ಎದುರು ಅ. 22ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು.
ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಹಸಿರು ಸೇನೆ ಹಾಗೂ ರೈತಸಂಘದ ಕಾರ್ಯಕರ್ತರ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಯಿತು.
ರೈತಸಂಘದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಹಿಂದಿನ ವರ್ಷ ಬೆಳೆ ವಿಮೆ ತುಂಬಿದ ರೈತರಿಗೆ ಮಧ್ಯಂತರ ಪರಿಹಾರವಾಗಿ ಶೇ. 25ರಷ್ಟು ವಿತರಿಸಿವೆ. ರೈತರು 27.65 ಕೋಟಿ ರೂ., ರಾಜ್ಯ, ಕೇಂದ್ರ ಸರ್ಕಾರಗಳು 228 ಕೋಟಿ ರೂ. ಸೇರಿ ಒಟ್ಟು 255 ಕೋಟಿ ರೂ. ವಿಮೆ ಕಂಪನಿಗೆ ಜಮೆಯಾಗಿದ್ದು, 131 ಕೋಟಿ ರೂ. ಬಿಡುಗಡೆಯಾಗಿದೆ. ನಾವು ತುಂಬಿದ ಹಣದಲ್ಲಿ ಇನ್ನೂ 65 ಕೋಟಿ ರೂ. ಬಿಡುಗಡೆ ಬಾಕಿ ಉಳಿದಿದ್ದು, ಜನಪ್ರತಿನಿಧಿಗಳು ರೈತಪರ ಧ್ವನಿ ಎತ್ತಿ ನ್ಯಾಯ ಕೊಡಿಸುತ್ತಿಲ್ಲ. ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಮೆ ಹಣ ಬಿಡುಗಡೆಗೂ ಮಳೆ ಹಾನಿ ಪರಿಹಾರಕ್ಕೂ ಏನು ಸಂಬಂಧ ಎನ್ನುವುದು ತಿಳಿಯಂತಾಗಿದೆ. ತಹಸೀಲ್ದಾರ್ ಕಚೇರಿಗೆ ಸರ್ಕಾರದ ನಿರ್ದೇಶನ ಇಲ್ಲದ್ದರಿಂದ ಸಿಬ್ಬಂದಿ ಗೊಂದಲದಲ್ಲಿದ್ದಾರೆ ಎಂದರು.
ತಾಲೂಕು ರೈತಸಂಘದ ಕಾರ್ಯಾಧ್ಯಕ್ಷ ಕಿರಣಕುಮಾರ ಗಡಿಗೋಳ ಮಾತನಾಡಿ, ಕೇಂದ್ರದ ಕೃಷಿ ಸಚಿವರು ದೇಶದಲ್ಲಿ ರೈತರಿಗೆ ವಿಮೆ ಕಂಪನಿಗಳು ಪರಿಹಾರ ನೀಡುವಲ್ಲಿ ವಿಳಂಭ ನೀತಿ ಅನುಸರಿದಲ್ಲಿ ಶೇ. 12ರಷ್ಟು ಬಡ್ಡಿ ಸೇರಿಸಿ ಹಣ ಬಿಡುಗಡೆ ಮಾಡುವಂತೆ ಹೇಳಿಕೆ ನೀಡಿದ್ದಾರೆ. ಆದರೆ, ಇದನ್ನು ವಿಮಾ ಕಂಪನಿಗಳು ಎಷ್ಟರ ಮಟ್ಟಿಗೆ ಪಾಲಿಸಲಿವೆ ಎನ್ನುವುದು ಹಾಸ್ಯಾಸ್ಪದವಾಗಿದೆ ಎಂದರು.
ಹಸಿರು ಸೇನೆ ತಾಲೂಕಾಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ಬೆಳೆ ವಿಮೆ ಬಿಡುಗಡೆ, ಬೆಳೆ ಹಾನಿ ಪರಿಹಾರ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಅ. 22ರಂದು ಬೆಳಗ್ಗೆ 10 ಗಂಟೆಗೆ ತಹಸೀಲ್ದಾರ್ ಕಾರ್ಯಾಲಯ ಬಳಿ ಪ್ರತಿಭಟನೆ ನಡೆಸಲಿದ್ದು, ತಾಲೂಕಿನ ಎಲ್ಲ ರೈತರು ಮಳೆ ಹಾನಿಗೆ ಸಂಬಂಧಿಸಿದ ಅರ್ಜಿ ಸಲ್ಲಿಸಲಿದ್ದಾರೆ. ತಾಲೂಕಿನ ವಿವಿಧ ಗ್ರಾಮಗಳಿಂದ ಸುಮಾರು 2 ಸಾವಿರ ರೈತರು ಸೇರುವ ನಿರೀಕ್ಷೆಯಿದ್ದು, ಪ್ರತಿಭಟನೆಯಲ್ಲಿ ರೈತರು ಚಕ್ಕಡಿ ಎತ್ತುಗಳು, ಜಾನುವಾರುಗಳನ್ನು ತರಲಿದ್ದಾರೆ ಎಂದರು.
ರೈತಮುಖಂಡರಾದ ರುದ್ರನಗೌಡ್ರ ಕಾಡನಗೌಡ್ರ, ಫಕೀರೇಶ ಅಜಗೊಂಡ್ರ, ಚಿಕ್ಕಪ್ಪ ಛತ್ರದ, ಮಲ್ಲೇಶಪ್ಪ ಡಂಬಳ, ಜಾನ್ ಪುನೀತ್, ಪ್ರಕಾಶ ಸಿದ್ದಪ್ಪನವರ, ನಿಂಗಪ್ಪ ಮಾಸಣಗಿ, ಮೌನೇಶ ಕಮ್ಮಾರ, ಇತರರಿದ್ದರು.