

ಗುಂಡ್ಲುಪೇಟೆ: ಅನಿಯಮಿತ ವಿದ್ಯುತ್ ಕಡಿತ, ಹೆಚ್ಚುತ್ತಿರುವ ವನ್ಯಜೀವಿಗಳ ದಾಳಿ ಹಾಗೂ ಅಕ್ರಮವಾಗಿ ಖನಿಜ ಸಂಪತ್ತು ಸಾಗಣೆ ವಿರುದ್ಧ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದ ಕಾರ್ಯಕರ್ತರು ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ನೇತೃತ್ವದಲ್ಲಿ ಸಾರಿಗೆ ಬಸ್ ನಿಲ್ದಾಣದ ಎದುರು ಮಾನವ ಸರಪಳಿ ರಚಿಸುವ ಮೂಲಕ ವಾಹನಗಳ ಸಂಚಾರವನ್ನು ತಡೆದರು.
ಬೇಸಿಗೆ ಆರಂಭದಲ್ಲಿಯೇ ಅನಿಯಮಿತ ವಿದ್ಯುತ್ ಕಡಿತವುಂಟಾಗುತ್ತಿದೆ. ಇದರಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲಾಗುತ್ತಿಲ್ಲ. ಬನ್ನಿತಾಳಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡದೆ ಸತಾಯಿಸುತ್ತಿದ್ದಾರೆ. ತಾಲೂಕಿನ ಖನಿಜ ಸಂಪತ್ತನ್ನು ಹಗಲಿರುಳು ಅಕ್ರಮವಾಗಿ ಕೇರಳಕ್ಕೆ ಸಾಗಣೆ ಮಾಡುತ್ತಿದ್ದರೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ನಿರಂತರ ವನ್ಯಜೀವಿ ದಾಳಿಯಿಂದ ಬೆಳೆಗಳು ನಾಶವಾಗುತ್ತಿದ್ದರೂ ಇತ್ತ ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಕೂಡಲೇ ಅರಣ್ಯ, ಸೆಸ್ಕ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಎಲ್ಲ ಅಕ್ರಮಗಳನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕು ಎಂಬ ಮನವಿ ಪತ್ರವನ್ನು ಕಂದಾಯಾಧಿಕಾರಿಗಳಿಗೆ ನೀಡಿದರು. ಎಲ್ಲ ಅಕ್ರಮಗಳನ್ನು ತಡೆಗಟ್ಟಲು ತಾಲೂಕು ಆಡಳಿತ ವಿಫಲವಾದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.