ತಹಸೀಲ್ದಾರ್ ಕಚೇರಿ ಮುಂದೆ ರೈತ ಸಂಘಟನೆಗಳಿಂದ ಪ್ರತಿಭಟನೆ

dd
Published on

ಮೈಸೂರು: ಪ್ರಶ್ನೆ ಮಾಡುತ್ತಾರೆ ಎಂದು ಸಭೆಗೆ ಆಹ್ವಾನಿಸದೆ ನಿರ್ಲಕ್ಷೃ ಮಾಡಲಾಗಿದೆ ಎಂದು ಆರೋಪಿಸಿ ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು, ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕುಂದುಕೊರತೆ ಆಲಿಸಲು ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಮುಖಂಡರ, ಸಾರ್ವಜನಿಕರ ಸಭೆ ಆಯೋಜಿಸಲಾಗಿತ್ತು. ಆದರೆ ಈ ಸಭೆಗೆ ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರನ್ನು ಕೈ ಬಿಡಲಾಗಿತ್ತು. ಇದನ್ನು ವಿರೋಧಿಸಿ ಮುಖಂಡರು, ಮಿನಿ ವಿಧಾನಸೌಧದ ಮುಂದೆ ಪ್ರತಿಭಟಿಸಿದರು. ಈ ಸಮಯದಲ್ಲಿ ಸಮಾಧಾನ ಪಡಿಸಲು ಬಂದ ಉಪ ತಹಸೀಲ್ದಾರ್ ಮಂಜುನಾಥ್, ಶಿರಸ್ತೇದಾರ್ ಭರತ್ ಅವರೊಂದಿಗೆ ವಾಗ್ವಾದ ನಡೆಯಿತು.
ಕಳೆದ ಕುಂದುಕೊರತೆ ಸಭೆಯಲ್ಲಿ ಮಾರ್ಬಳ್ಳಿ, ಅಲನಕೆರೆ, ಆಯರಹಳ್ಳಿ ಹಲವು ಗ್ರಾಮಗಳ ಸ್ಮಶಾನವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಜಮೀನಿಗೆ ಹೋಗಲು ದಾರಿ ಬಿಡುತ್ತಿಲ್ಲ, ದುರಸ್ಥಿಗೊಳಿಸಿ ಹಕ್ಕಪತ್ರ, ಸಾಗುವಳಿ ಪತ್ರ ನೀಡುತ್ತಿಲ್ಲ ಎನ್ನುವ ಹಲವು ಸಮಸ್ಯೆಗಳನ್ನು ಮುಖಂಡರು ಮುಂದಿಟ್ಟಿದ್ದರು. ಆದರೆ ಇವುಗಳನ್ನು ಪ್ರಶ್ನಿಸುತ್ತಾರೆ ಎನ್ನುವ ಉದ್ದೇಶದಿಂದ ಆಹ್ವಾನ ನೀಡಿಲ್ಲ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹಿಮ್ಮಾವು ರಘು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಮುಖ್ಯದ್ವಾರದಲ್ಲಿಯೇ ಮಲಗಿ ಪ್ರತಿಭಟನೆ ನಡೆಸಿದರು. ಬಳಿಕ ಅಧಿಕಾರಿಗಳು ಸಮಾಧಾನ ಪಡಿಸಿ, ರೈತ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆಗಳನ್ನು ಹಂತ, ಹಂತವಾಗಿ ಬಗೆಹರಿಸುವುದಾಗಿ ಭರವಸೆ ನೀಡಿ, ಈಗ ಅಗಿರುವ ಲೋಪ ಸರಿಪಡಿಸಿಕೊಂಡು ಮುಂದಿನ ಸಭೆಗೆ ಆಹ್ವಾನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಜಿಲ್ಲಾಧ್ಯಕ್ಷ ಟಿ.ಆರ್.ವಿದ್ಯಾಸಾಗರ, ನಂಜನಗೂಡು ತಾಲೂಕು ಸತೀಶ್‌ರಾವ್, ಮುಖಂಡರಾದ ಮಹದೇವ ನಾಯಕ, ಆನಂದ, ಆಯರಹಳ್ಳಿ ಸೋಮಣ್ಣ, ಮಾರ್ಬಳ್ಳಿ ಹುಂಡಿ ಶ್ವೇತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net