

ಹಾನಗಲ್ಲ: ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ವಿದ್ಯುತ್ ಕಂಬದಿಂದ ಕೆಳಗೆ ಬಿದ್ದು ಕಾರ್ವಿುಕ ಮೃತಪಟ್ಟ ಘಟನೆ ತಿರುವು ಪಡೆದಿದ್ದು, ನಾಲ್ವರು ರೈತರು ತಮ್ಮ ಕೊಳವೆಬಾವಿಗಳಿಗೆ ಎರಡೆರಡು ಕಡೆಗಳಿಂದ ವಿದ್ಯುತ್ ಸಂಪರ್ಕ ಪಡೆದಿರುವುದು ಬೆಳಕಿಗೆ ಬಂದಿದೆ.
ಪಟ್ಟಣದ ಹೆಸ್ಕಾಂ ಕಚೇರಿ ಎದುರು ಶನಿವಾರ ಧಿಡೀರ್ ಪ್ರತಿಭಟನೆ ನಡೆಸಿದ ವಿದ್ಯುತ್ ಗುತ್ತಿಗೆದಾರರು ಹಾಗೂ ಲೈನ್ಮನ್ಗಳು ತಪ್ಪಿತಸ್ಥ ರೈತರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ತಾಲೂಕಿನ ರಾಮತೀರ್ಥ ಹೊಸಕೊಪ್ಪ ಗ್ರಾಮದ ಗುತ್ತಿಗೆದಾರರು ಕಾಡಶೆಟ್ಟಿಹಳ್ಳಿಯಲ್ಲಿ ವಿದ್ಯುತ್ ಕಾಮಗಾರಿಗಾಗಿ ಇದೇ ಗ್ರಾಮದ ಸಹದೇವ ಹುಡೇದ ಎಂಬ ಕಾರ್ವಿುಕನನ್ನು ಕರೆತಂದಿದ್ದರು. ಕಾಮಗಾರಿ ಸಂದರ್ಭದಲ್ಲಿ ಸ್ಥಳೀಯ ವಿಭಾಗ ಅಧಿಕಾರಿ ಎಲ್ಸಿ ನೀಡಿದ್ದರಾದರೂ, ವಿದ್ಯುತ್ ಕಂಬದ ತಂತಿಯಲ್ಲಿ ವಿದ್ಯುತ್ ಪ್ರವಹಿಸಿ ಕಾರ್ವಿುಕ ಕಂಬದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದ. ಈ ಘಟನೆ ಕುರಿತಂತೆ ಗುತ್ತಿಗೆದಾರ ಕಾರ್ವಿುಕನ ಕುಟುಂಬದವರಿಗೆ 7 ಲಕ್ಷ ರೂ.ಗಳ ಪರಿಹಾರ ನೀಡಿದ್ದರು. ಆದರೆ, ಘಟನೆಗೆ ಕಾರಣವೇನು? ಎಂಬುದನ್ನುಲೈನ್ಮನ್ಗಳು ಪರಿಶೀಲಿಸಿದಾಗ ಈ ಫೀಡರ್ನಲ್ಲಿರುವ ನಾಲ್ವರು ರೈತರು ತಮ್ಮ ಕೊಳವೆಬಾವಿಗಳಿಗೆ ಎರಡೆರಡು ಕಡೆಗಳಿಂದ ವಿದ್ಯುತ್ ಸಂಪರ್ಕ ಪಡೆದಿರುವುದು ಗೊತ್ತಾಗಿದೆ. ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತರಲಾಗಿತ್ತು. ಜಾಗೃತ ದಳ ವಿಭಾಗದವರಿಗೂ ಈ ವಿಷಯವನ್ನು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದರು. ಆದರೆ, ಅಧಿಕಾರಿಗಳು ಸ್ಥಳಕ್ಕೆ ಬಾರದ್ದರಿಂದ ಗುತ್ತಿಗೆದಾರರು ಹಾಗೂ ಲೈನ್ಮನ್ಗಳಲ್ಲಿ ಆಕ್ರೋಶ ಹೆಚ್ಚಿತು. ತಪ್ಪಿತಸ್ಥರ ಮೇಲೆ ಪ್ರಕರಣ ದಾಖಲಿಸದ ಹೊರತು ಕೆಲಸಕ್ಕೆ ತೆರಳುವುದಿಲ್ಲ ಎಂದು ಸಿಬ್ಬಂದಿ ಹಾಗೂ ಕಾರ್ವಿುಕರು ಪಟ್ಟುಹಿಡಿದು, ಹೆಸ್ಕಾಂ ಕಚೇರಿ ಎದುರು ಧರಣಿ ನಡೆಸಿದರು.
ಕಾಡಶೆಟ್ಟಿಹಳ್ಳಿ ಸಮೀಪ ವಿದ್ಯುತ್ ಲೈನ್ ತುಂಡಾಗಿದ್ದರಿಂದ ಅದನ್ನು ಸರಿಪಡಿಸಲು ಗುತ್ತಿಗೆದಾರ ಮಾಲತೇಶ ಮಣ್ಣಮ್ಮನವರ ಎಂಬುವವರಿಗೆ ಕಾಮಗಾರಿ ಕೈಗೊಳ್ಳಲು ಸ್ಥಳೀಯ ಹೆಸ್ಕಾಂ ಅಧಿಕಾರಿಗಳು ಸೂಚಿಸಿದ್ದರು. ಅದರಂತೆ ಕಾಮಗಾರಿ ಕೈಗೊಂಡಾಗ ವಿದ್ಯುತ್ ಅವಘಡ ಸಂಭವಿಸಿತ್ತು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಿಭಾಗ ಅಧಿಕಾರಿ ಗಿರೀಶ ಗುಮಗಂಡಿ, ಲೈನ್ಮನ್, ಗುತ್ತಿಗೆದಾರನ ಮೇಲೆ ಪ್ರಕರಣ ದಾಖಲಾಗಿತ್ತು. ಇದನ್ನು ಪ್ರತಿಭಟಿಸಿದ ಗುತ್ತಿಗೆದಾರರ ಸಂಘ, ಲೈನ್ವುನ್ಗಳು ‘ತಪ್ಪಿತಸ್ಥ ರೈತರ ಮೇಲೆ ಪ್ರಕರಣ ದಾಖಲಿಸದ ಹೊರತು ಕೆಲಸಕ್ಕೆ ಹಾಜರಾಗುವುದಿಲ್ಲ’ ಎಂದು ಪಟ್ಟು ಹಿಡಿದು ಧರಣಿ ನಡೆಸಿದರು.
ಭರವಸೆ ನೀಡಿದ ಅಧಿಕಾರಿಗಳು:
ಪ್ರತಿಭಟನೆ ಹಿನ್ನೆಲೆ ಹಾನಗಲ್ಲಿನ ಹೆಸ್ಕಾಂ ಕಚೇರಿಗೆ ಭೇಟಿ ನೀಡಿದ ಹಾವೇರಿ ವೃತ್ತದ ಹೆಸ್ಕಾಂ ಪ್ರಭಾರಿ ಅಧೀಕ್ಷಕ ಇಂಜಿನಿಯರ್ ನಾರಾಯಣ ಕಳ್ಳಿಮನಿ, ಕಾರ್ವಿುಕನ ಸಾವಿನ ಹಿಂದಿರುವ ಕಾರಣ ಕಂಡುಹಿಡಿಯಲಾಗಿದೆ. ಈ ಕುರಿತಂತೆ ಜಾಗೃತದಳಕ್ಕೆ ಮಾಹಿತಿ ನೀಡಿದ್ದು, ವರದಿ ಸಲ್ಲಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸುವ ಪ್ರಕ್ರಿಯೆ ನಡೆದಿವೆ. ಸಿಬ್ಬಂದಿ ಭರವಸೆ ಕಳೆದುಕೊಳ್ಳಬಾರದು. ಸೋಮವಾರದ ಹೊತ್ತಿಗೆ ದೂರು ದಾಖಲಿಸಲಾಗುತ್ತದೆ ಎಂದರು. ಹಿರಿಯ ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ವಿದ್ಯುತ್ ಪ್ರಸರಣ ನಿಗಮದ ಸಂಘಟನಾ ಕಾರ್ಯದರ್ಶಿ ಶಿವಾನಂದ ದೊಡ್ಡಮನಿ, ಕರಿಯಪ್ಪ ಅಗಡಿ, ಶಂಕರ ಕಾಳಶೆಟ್ಟಿ, ಜಯಣ್ಣ ಕೋಲಾರ, ನಾಗರಾಜ ತಟ್ಟೆಪ್ಪನವರ, ವಿ.ಎಸ್. ಮರಿಗೌಡರ, ಸಾಗರ ಗಣೇಶಗುಡಿ, ಎ.ಡಿ. ಸೋಮಾಪುರ, ಚಾಮರಾಜ ಕುಲುಮಿ, ಮಲ್ಲೇಶ ಪೂಜಾರ, ನಾಗರಾಜ ವಡ್ಡರ, ಎಸ್.ವಿ. ಮಲ್ಲಿಗ್ಗಾರ, ಮಾಲತೇಶ ಮಣ್ಣಮ್ಮನವರ, ಬಸವರಾಜ ದ್ಯಾವಣ್ಣನವರ, ವೀರೇಶ ಹಿರೇಮಠ, ಇಬ್ರಾಹಿಂ ಜಡೆ, ಎಂ.ಎಂ. ಮುಲ್ಲಾ, ಪ್ರಭು ಪಾಟೀಲ, ಮಂಜು ಸಾಲಿ, ನಿಂಗಪ್ಪ ಸುಣಗಾರ ಇತರರು ಪಾಲ್ಗೊಂಡಿದ್ದರು.