ಮೈಸೂರು: ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಅಪಘಾತದ ವೇಳೆಯ ಹಿಟ್ ಆ್ಯಂಡ್ ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಾಲಕರಿಗೆ ಶಿಕ್ಷೆ ವಿಧಿಸುವ ವಿಧೇಯಕ ವಿರೋಧಿಸಿ ಜ.17ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಎಂದು ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ.ಕೋದಂಡರಾಮು ತಿಳಿಸಿದರು.
ಅಪಘಾತ ನಡೆಸಿ ಸ್ಥಳದಲ್ಲಿ ವಾಹನ ನಿಲ್ಲಿಸದೆ ಹೋದರೆ ಹತ್ತು ವರ್ಷ ಕಠಿಣ ಶಿಕ್ಷೆ, ಹತ್ತು ಲಕ್ಷ ರೂ.ವರೆಗೆ ದಂಡ ವಿಧಿಸುವ ನೂತನ ಕಾಯ್ದೆ ವಾಹನ ಚಾಲಕರು ಹಾಗೂ ಮಾಲೀಕರ ವಿರೋಧಿಯಾಗಿದೆ ಎಂದು ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಾರಿಗೆ ಉದ್ಯಮ ಅವಲಂಬಿಸಿರುವ ಲಕ್ಷಾಂತರ ವಾಹನ ಚಾಲಕರು, ನಿರ್ವಾಹಕರು ಹಾಗೂ ಮಾಲೀಕರಿಗೆ ನೂತನ ಕಾಯ್ದೆಯಿಂದ ದಿಕ್ಕು ತೋಚದಂತಾಗಿದೆ. ಅಪಘಾತವನ್ನು ಯಾರೂ ಉದ್ದೇಶಪೂರ್ವಕವಾಗಿ ಮಾಡುವುದಿಲ್ಲ. ಒಂದು ವೇಳೆ ಸಂಭವಿಸಿದಾಗ ಚಾಲಕ ಅಲ್ಲೇ ಇದ್ದಲ್ಲಿ ಸಾರ್ವಜನಿಕರು ಹಲ್ಲೆ ಮಾಡುತ್ತಾರೆ. ಇದರಿಂದಾಗಿ ಆತ ಹೆದರಿ ಅಲ್ಲಿಂದ ಪರಾರಿಯಾಗಿ ಬೇರೊಂದು ಠಾಣೆಗೆ ಹೋಗಬೇಕಾಗುತ್ತದೆ. ಇದನ್ನು ಹಿಟ್ ಆ್ಯಂಡ್ ರನ್ ಎಂದು ಪರಿಗಣಿಸಿ ಕಠಿಣ ಶಿಕ್ಷೆ ವಿಧಿಸುವುದರಿಂದಾಗಿ ಆತನ ಕುಟುಂಬ ಬೀದಿಗೆ ಬೀಳುತ್ತದೆ ಎಂದರು.
ಅಲ್ಲದೇ 10 ಲಕ್ಷ ರೂ.ವರೆಗೆ ದುಬಾರಿ ದಂಡ ಪಾವತಿಸುವುದೂ ಆತನಿಗೆ ಅಸಾಧ್ಯವಾಗುತ್ತದೆ. ಹೀಗಾಗಿ ಈಗಾಗಲೇ ಹಲವಾರು ಚಾಲಕರು ತಮ್ಮ ವೃತ್ತಿಯಿಂದ ಹಿಂದೆ ಸರಿಯುವುದು ಆರಂಭವಾಗಿದೆ. ಕಾನೂನಿನಲ್ಲಿ ತಿದ್ದುಪಡಿ ತರಬೇಕು ಅಥವಾ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಈ ಲಾರಿಗಳ ಸಂಚಾರ ಬಂದ್ ಮಾಡಲಾಗುತ್ತಿದೆ ಎಂದರು.
ಒಕ್ಕೂಟದ ವಿವಿಧ ಪದಾಧಿಕಾರಿಗಳಾದ ಶ್ರೀನಿವಾಸರಾವ್, ನಾಗಚಂದ್ರ, ವಿಶ್ವನಾಥ್ ಇತರರಿದ್ದರು.