ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಜಿಲ್ಲಾ ಸಮಿತಿ ಕಾರ್ಯಕರ್ತರ ಪ್ರತಿಭಟನೆ

1 (1)
Published on

ಮಂಡ್ಯ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಜಿಲ್ಲಾ ಸಮಿತಿ ಕಾರ್ಯಕರ್ತರು ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಜಮಾವಣೆಗೊಂಡ ಕಟ್ಟಡ ನಿರ್ಮಾಣ ಕಾರ್ಮಿಕರ ಜಿಲ್ಲಾ ಸಮಿತಿ ಕಾರ್ಯಕರ್ತರು, ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಘೋಷಣೆಗೆ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿ ಕಾರ್ಮಿಕ ಇಲಾಖೆ ಕಚೇರಿ ಮುಂದೆ ಜಮಾಯಿಸಿ ಘೋಷಣೆ ಕೂಗಿದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಕಾರ್ಮಿಕರ ನೈಜ ಸಮಸ್ಯೆಗಳಿಗೆ ಪರಿಹಾರ ಸಿಗುವ ಬದಲಾಗಿ ಕಲ್ಯಾಣ ಮಂಡಳಿಗೆ ಹೊರೆಯಾಗುವ ರೀತಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಕಾರ್ಮಿಕ ಸಚಿವರು ಘೋಷಣೆ ಮಾಡುತ್ತಾ ನೂರಾರು ಕೋಟಿ ರೂ ಕಲ್ಯಾಣ ಮಂಡಳಿ ನಿಧಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾಗಿ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಸಚಿವರ ಜತೆ ಎರಡು ಬಾರಿ ಚರ್ಚೆ ನಡೆಸಲಾಗಿದೆ. ಇತ್ತೀಚೆಗೆ ಮಂಡಳಿಯ ನೂತನ ಕಾರ್ಯದರ್ಶಿ ಕೂಡ ವಿಸ್ತೃತವಾದ ಚರ್ಚೆಯನ್ನು ಕಾರ್ಮಿಕ ಪ್ರತಿನಿಧಿಗಳ ಜತೆ ನಡೆಸಿದ್ದಾರೆ. ಆದರೂ ನಮ್ಮ ಯಾವುದೇ ಸಮಸ್ಯೆಗಳಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ ಎಂದು ದೂರಿದರು.

ಬಾಕಿ ಇರುವ ಶೈಕ್ಷಣಿಕ ಅರ್ಜಿಗಳಿಗೆ ಹಣ ವರ್ಗಾವಣೆ ಮಾಡಬೇಕು. ಫಲಾನುಭವಿಯ ಕಾರ್ಡ್ ನವೀಕರಣಕ್ಕೆ ವೇತನ ಚೀಟಿ ಮತ್ತು ಹಾಜರಾತಿ ಪಟ್ಟಿ ಕಡ್ಡಾಯಗೊಳಿಸಿರುವ ಆದೇಶವನ್ನು ವಾಪಸ್ ಪಡೆಯಬೇಕು. ಬೋಗಸ್ ಕಾರ್ಡ್‌ಗಳನ್ನು ನಿಯಂತ್ರಿಸಬೇಕು. ಆರೋಗ್ಯ ಸಂಜೀವಿನಿ ಜಾರಿಗೊಳಿಸಬೇಕು. ಹೊಸ ತಂತ್ರಾಂಶ ಆರಂಭಿಸಬೇಕು. ಪಿಂಚಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಬೇಕು. ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ಮನೆ ನಿರ್ಮಾಣಕ್ಕೆ 5 ಲಕ್ಷ ರೂ ನೀಡಬೇಕು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಎಂ.ಎಂ.ಶಿವಕುಮಾರ್, ನಿಂಗರಾಜು ಕೀಲಾರ, ಎಂ.ಜಿ.ಹಳ್ಳಿ ಶ್ರೀನಿವಾಸ್, ಮದ್ದೂರು ವಿ.ಶಿವಕುಮಾರ್, ಎಂ.ಪಿ.ಮಹೇಶ್, ಪ್ರಕಾಶ್, ಎಚ್.ಉಮೇಶ್‌ರಾಜು, ಅನಿಲ್‌ಕುಮಾರ್, ಎಚ್.ಪಿ.ಶ್ರೀಧರಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net