

ಹಾವೇರಿ: ಭಾರತದ ಮೇಲೆ ಚೀನಾದ ಅಪ್ರಚೋದಿತ ದಾಳಿ ಖಂಡಿಸಿ ಹಾಗೂ ದೇಶದಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ವಿನಂತಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಸಿದ್ದಪ್ಪ ಹೊಸಮನಿ ವೃತ್ತದಲ್ಲಿ ಸಮಾವೇಶಗೊಂಡಿದ್ದ ಬಿಜೆಪಿ ಕಾರ್ಯಕರ್ತರು, ಚೀನಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ನಂತರ ಚೀನಾ ವಸ್ತುಗಳನ್ನು ದಹಿಸಿದರು.
ಸರ್ಕಾರ ನೇರವಾಗಿ ಚೀನಾ ವಸ್ತುಗಳನ್ನು ಬಹಿಷ್ಕರಿಸುವುದು ವಿದೇಶಿ ವಿನಿಮಯ ಒಪ್ಪಂದಗಳ ಉಲ್ಲಂಘನೆಯಾಗುತ್ತದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಚೀನಾ ವಸ್ತುಗಳ ಬಳಕೆಯನ್ನು ಹಾಗೂ ಚೀನಾ ಆಪ್ ಮತ್ತು ಇತರೆ ಚೀನಾ ಪ್ರಾಯೋಜಿತ ಉತ್ಪನ್ನಗಳ, ಸಾಪ್ಟವೇರ್ ಬಳಕೆ ಕೈಬಿಡಬೇಕು. ಈ ಹಿಂದೆ ಕಾಂಗ್ರೆಸ್ ಮಾಡಿದ ಎಡವಟ್ಟಿನ ಪರಿಣಾಮದಿಂದಾಗಿ 1962ರಲ್ಲಿ ಅಕ್ಸಾಯಿ, 1963ರಲ್ಲಿ ಕರಕೋರಂ ಪಾಸ್, 2008ರಲ್ಲಿ ತೀಯಾ ಪಂಗ್ನಾಕ್, 2008ರಲ್ಲಿ ಚಬಾಜಿ ವ್ಯಾಲಿ, 2009ರಲ್ಲಿ ಡೂಮ್ಲಿ, 2012ರಲ್ಲಿ ಡೇಂ ಜಾಕ್, 2013ರಲ್ಲಿ ರಾಕಿನುಲ್ಲಾ ಪ್ರದೇಶಗಳನ್ನು ಚೀನಾ ಭಾರತದಿಂದ ಆಕ್ರಮಿಸಿಕೊಂಡಿತ್ತು. ಚೀನಾ ಭೌಗೋಳಿಕವಾಗಿ ವಿಸ್ತೀರ್ಣವಾದವನ್ನು ಅನುಸರಿಸಿದರೆ, ಕಾಂಗ್ರೆಸ್ ಅನ್ಯ ದೇಶಗಳಿಗೆ ಭಾರತದ ಭೂ ಪ್ರದೇಶಗಳನ್ನು ಬಿಟ್ಟು ಕೊಡುತ್ತ, ಭಾರತದ ಬಹುತೇಕ ಗಡಿ ಪ್ರದೇಶ ಬಿಕ್ಕಟ್ಟಿನಿಂದ ಕೂಡಿದೆ ಎಂದು ಪ್ರತಿಭಟನಾಕಾರರು ದೂರಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಗಟ್ಟಿ ನಿರ್ಧಾರ ಹಾಗೂ ಭಾರತೀಯ ಸೈನ್ಯದ ದಿಟ್ಟತನದಿಂದ ಚೀನಾ ಸೈನಿಕರಿಗೆ ಈಗಾಗಲೇ ಮಣ್ಣು ಮುಕ್ಕಿಸಲಾಗಿದೆ. ಭಾರತದ ಶಾಂತ ಸ್ವಭಾವವನ್ನು ಚೀನಾ ದುರುಪಯೋಗ ಪಡಿಸಿಕೊಂಡರೆ ತಕ್ಕ ಪ್ರತ್ಯುತ್ತರ ನೀಡುವುದು ಅನಿವಾರ್ಯವಾಗುತ್ತದೆ ಎಂದು ಘೊಷಣೆ ಕೂಗಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಜಿಪಂ ಸದಸ್ಯ ವಿರೂಪಾಕ್ಷಪ್ಪ ಕಡ್ಲಿ, ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ ಮುಳ್ಳೂರ, ಶಶಿಧರ ಹೊಸಳ್ಳಿ, ನಗರ ಮಂಡಲ ಅಧ್ಯಕ್ಷ ಗಿರೀಶ ತುಪ್ಪದ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಸದಸ್ಯ ನಂಜುಂಡೇಶ ಕಳ್ಳೇರ, ನಗರಸಭೆ ಸದಸ್ಯರಾದ ಚನ್ನಮ್ಮ ಬ್ಯಾಡಗಿ, ಕವಿತಾ ಯಲವಗಿಮಠ, ಶಿವಯೋಗಿ ಹುಲಿಕಂತಿಮಠ, ಪ್ರಭು ಹಿಟ್ನಳ್ಳಿ, ಗಿರೀಶ ಮಾಸೂರು ಇತರರಿದ್ದರು.