

ಹನೂರು: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಮಂಗಳವಾರ ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಸೂರಪ್ಪನ ದೊಡ್ಡಿಯ ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ, ಗ್ರಾಮದಲ್ಲಿ ಸುಮಾರು 25ಕ್ಕೂ ಹೆಚ್ಚು ಕುಟುಂಬಗಳಿವೆ. ಆದರೆ ಗ್ರಾಪಂ ಆಡಳಿತ ತೊಂಬೆ ಹಾಗೂ ನಲ್ಲಿಗಳಿಗೆ ನೀರನ್ನು ಪೂರೈಸುತ್ತಿಲ್ಲ. ಇದರಿಂದ ಕಳೆದ ಹಲವು ತಿಂಗಳಿನಿಂದ ನೀರಿನ ಸಮಸ್ಯೆ ತೀವ್ರವಾಗಿದೆ. ಬಿಂದಿಗೆ ನೀರಿಗೂ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಬೇಸಿಗೆ ವೇಳೆ ನೀರಿನ ಸಮಸ್ಯೆ ತಲೆದೂರಿದ್ದಲ್ಲಿ ಸಮೀಪದ ಹಳ್ಳದಿಂದ ನೀರನ್ನು ಹೊತ್ತು ತರಲಾಗುತ್ತಿತ್ತು. ಹೇಗೋ ನೀರಿನ ಸಮಸ್ಯೆ ನೀಗುತ್ತಿತ್ತು. ಆದರೆ ಇದೀಗ ಹಳ್ಳವು ಸಂಪೂರ್ಣ ಬತ್ತಿಹೋಗಿದೆ. ಇತ್ತ ಜಮೀನಿನ ಪಂಪ್‌ಸೆಟ್‌ಗಳಲ್ಲೂ ನೀರಿಲ್ಲ. ಪರಿಣಾಮ ನೀರಿಗಾಗಿ ನರಕಯಾತನೆ ಅನುಭವಿಸುತ್ತಿದ್ದೇವೆ. ಈ ಬಗ್ಗೆ ಗ್ರಾಪಂ ಆಡಳಿತಕ್ಕೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕುಡಿಯುವ ನೀರಿನ ಸಮಸ್ಯೆ ನೀಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀರು ಕೊಡಿ, ಇಲ್ಲವೇ ವಿಷ ಕೊಡಿ: ಗ್ರಾಮದಲ್ಲಿ ಕಳೆದ 2 ತಿಂಗಳಿನಿಂದ ಕುಡಿಯುವ ನೀರಿಗೆ ತೀವ್ರ ಸಮಸ್ಯೆಯಾಗಿದೆ. ಇದರಿಂದ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿ ಹೊಸ ಬೋರ್ ಕೊರೆಸುವುದರ ಮೂಲಕ ಕುಡಿಯುವ ನೀರು ಕೊಡಿ. ಇಲ್ಲವೆ ವಿಷ ಕೊಡಿ ಎಂದು ಗ್ರಾಮದ ಪುಷ್ಪಾ, ರಾಜಮಣಿ ಹಾಗೂ ಇತರರು ಆಕ್ರೋಶ ವ್ಯಕ್ತಪಡಿಸಿದರು.