

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸ್ವಾಭಿಮಾನಿ ವಿಶೇಷಚೇತನರ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ನಗರ ಪಾಲಿಕೆ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.
ನಗರ ಪಾಲಿಕೆ ವ್ಯಾಪ್ತಿಯಲ್ಲಿ 1990-91ನೇ ಸಾಲಿನಲ್ಲಿ ಅಂಗವಿಕಲರಿಗೆ 150ಕ್ಕೂ ಹೆಚ್ಚು ಎಸ್‌ಟಿಡಿ ಬೂತ್‌ಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಎಸ್‌ಟಿಡಿ ಬೂತ್‌ಗಳಲ್ಲಿ ಆದಾಯ ದೊರೆಯದ ಹಿನ್ನೆಲೆಯಲ್ಲಿ ಎಸ್‌ಟಿಡಿ ಬೂತ್‌ಗಳನ್ನು ಚಿಲ್ಲರೆ ಅಂಗಡಿಗಳಾಗಿ ಪರಿವರ್ತಿಸಲಾಯಿತು. ಈ ಅಂಗಡಿಗಳಿಗೆ ವಿದ್ಯುತ್ ಸಂಪರ್ಕ ನೀಡಲು ಪಾಲಿಕೆ ಎನ್‌ಒಸಿ ನೀಡಬೇಕು, ಅಂಗವಿಕಲರ ಅಂಗಡಿಯ 100 ಮೀಟರ್ ವ್ಯಾಪ್ತಿಯಲ್ಲಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಕಾಯ್ದೆ ಪ್ರಕಾರ ಇತರೆ ವ್ಯಕ್ತಿಗಳಿಗೆ ಚಿಲ್ಲರೆ ಪೆಟ್ಟಿಗೆ ಅಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಸಮಿತಿ ಅಧ್ಯಕ್ಷ ಎಂ.ಗಿರೀಶ್ ಒತ್ತಾಯಿಸಿದರು.
ನಗರ ಪಾಲಿಕೆ 2019ರಿಂದ ಅಂಗವಿಕಲರಿಗೆ ಮೀಸಲಾಗಿರುವ ಶೇ.5 ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ. 2018 ರಿಂದ ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡುತ್ತಿಲ್ಲ. ನಿವೇಶನ ಖರೀದಿಗೆ ಸಹಾಯಧನ ನೀಡಲಾಗುತ್ತಿದ್ದು, ಇದರ ಜತೆಗೆ ಕಚ್ಚಾ ಮನೆಗಳನ್ನು ಕೊಂಡೊಕೊಳ್ಳಲು ಸಹಾಯಧನ ನೀಡಬೇಕು ಎಂದು ಆಗ್ರಹಿಸಿದರು.
ಅಂಗವಿಕಲರು ಕೆಲಸ ಕಾರ್ಯಗಳಿಗೆ ನಗರ ಪಾಲಿಕೆ ಕಚೇರಿಗೆ ಹೋಗಬೇಕಾದರೆ ಸಮರ್ಪಕವಾದ ರ‌್ಯಾಂಪ್, ಲಿಫ್ಟ್ ವ್ಯವಸ್ಥೆ ಇಲ್ಲ, ಈ ಕುರಿತು ಅಗತ್ಯ ಕ್ರಮ ವಹಿಸಬೇಕು. ಸಾಕಷ್ಟು ಅಂಗವಿಕಲರು ನಿರುದ್ಯೋಗಿಗಳಾಗಿದ್ದು, ಅವರಿಗೆ ನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಮಿತಿ ಪದಾಧಿಕಾರಿಗಳಾದ ನರಸಿಂಹೇಗೌಡ, ಪ್ರಭುಸ್ವಾಮಿ, ಸುಜಾತಾ, ಚಂದ್ರಕುಮಾರ್ ಹಾಗೂ ಇತರರು ಪಾಲ್ಗೊಂಡಿದ್ದರು.