

ಚಾಮರಾಜನಗರ: ತಮ್ಮ ತಮ್ಮ ಊರುಗಳಿಗೆ ತೆರಳಲು ಬಸ್‌ಗಳು ಒದಗಿಸದ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಲೆ ಮಹದೇಶ್ವರನ ಬೆಟ್ಟಕ್ಕೆ ಆಗಮಿಸಿದ್ದ ಭಕ್ತರು, ದಿಢೀರ್ ರಸ್ತೆ ಸಂಚಾರ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.
ಕಳೆದ ನಾಲ್ಕೈದು ದಿನಗಳ ಹಿಂದೆ ಮ.ಬೆಟ್ಟಕ್ಕೆ ಮೈಸೂರು, ಮಂಡ್ಯ, ಬೆಂಗಳೂರು ಹಾಗೂ ಬೇರೆಡೆಗಳಿಂದ ಕಾಲ್ನಡಿಗೆಯ ಮೂಲಕ ಭಕ್ತರು ಆಗಮಿಸಿದ್ದರು. ಇದರಲ್ಲಿ ಕೆಲ ಭಕ್ತರು ಮಂಗಳವಾರ ಬೆಳಗ್ಗೆ ದೇವರ ದರ್ಶನ ಪಡೆದು ಊರಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದರು. ಆದರೆ, ಸುಮಾರು 3 ಗಂಟೆಗಳ ಕಾಲ ಕಾದು ನಿಂತರೂ ಬಸ್ ಲಭ್ಯವಿರಲಿಲ್ಲ. ಈ ಬಗ್ಗೆ ಭಕ್ತರು ಘಟಕದ ಸಂಚಾರ ನಿಯಂತ್ರಣಾಧಿಕಾರಿ ಅವರನ್ನು ವಿಚಾರಿಸಿದಾಗ ಇಲ್ಲಿ ಯಾವುದೇ ಬಸ್‌ಗಳಿಲ್ಲ. ಹಾಗಾಗಿ ಬಸ್ ಬಂದ ತಕ್ಷಣ ಊರಿಗೆ ತೆರಳಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಇದರಿಂದ ಆಕ್ರೋಶಗೊಂಡ ಭಕ್ತರು ಮ.ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಇದೀಗ ಮಹಾ ಶಿವರಾತ್ರಿ ಜಾತ್ರೆ ಶುರುವಾಗುವುದರಿಂದ ಸಮರ್ಪಕ ಬಸ್ ಸೌಕರ್ಯ ಕಲ್ಪಿಸಬೇಕು. ಈಗಾಗಲೇ ಇರುವ ಭಕ್ತರಿಗೆ ಬಸ್‌ಗಳು ಇಲ್ಲ. ಇದು ಯಾವ ಸೀಮೆಯ ಆಡಳಿತ ಎಂದು ಭಕ್ತರು ಅಧಿಕಾರಿಗಳ ವಿರುದ್ಧ ಕೆಂಡಮಂಡಲರಾದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ನೂರಾರು ಭಕ್ತರು ಬಸ್ ಸೌಕರ್ಯ ಒದಗಿಸದಿರುವ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರವು ಬಿಟ್ಟಿ ಭಾಗ್ಯಗಳ ಹೆಸರಿನಲ್ಲಿ ದರೋಡೆ ಮಾಡುತ್ತಿದೆ ಎಂದು ಘೋಷಣೆ ಹಾಕುತ್ತಾ ಬಸ್ ನಿಲ್ದಾಣದಿಂದ ಕೊಳ್ಳೇಗಾಲ ಚೆಕ್‌ಪೋಸ್ಟ್‌ವರೆಗೆ ಕಾಲ್ನಡಿಗೆಯಲ್ಲಿ ತೆರಳಿದರು. ಮಾರ್ಗದುದ್ದಕ್ಕೂ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಸಮರ್ಪಕ ಬಸ್ ಸೌಕರ್ಯ ಕಲ್ಪಿಸುವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟುಹಿಡಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಭಕ್ತರನ್ನು ಸಮಾಧಾನಪಡಿಸಿ, ಆಗಮಿಸುವ ಬಸ್‌ಗಳಲ್ಲಿ ಊರಿಗೆ ತೆರಳಲು ಅನುವು ಮಾಡಿಕೊಟ್ಟರು. ಆದರೂ, ಭಕ್ತರು ಕಿಕ್ಕಿರಿದ ಬಸ್‌ನಲ್ಲಿ ನಿಂತುಕೊಂಡೇ ಪ್ರಯಾಣ ಬೆಳೆಸಿದರು. ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತ ಸಾಗಿದರು.