ಸಿಪಿಐಎಂ ಕಾರ್ಯಕರ್ತರಿಂದ ಪ್ರತಿಭಟನೆ

29 mlv1
Published on

ಮಳವಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರು ಶನಿವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಬಳಿ ಜಮಾವಣೆಗೊಂಡ ಪ್ರತಿಭಟನಾ ನಿರತರು ತಾಲೂಕು ಕಚೇರಿವರೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ತೆರಳಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ದೇವಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು ಜನ ಸಾಮಾ ನ್ಯರಿಗೆ ಆಹಾರ, ಆರೋಗ್ಯ, ಶಿಕ್ಷಣ, ವಸತಿ ಹಾಗೂ ಉದ್ಯೋಗ ಭದ್ರತೆ ನೀಡುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳು ಕಳೆದರೂ ಶೇ. 40 ರಷ್ಟು ನಾಗರಿಕರಿಗೆ ನಿವೇಶನವಿಲ್ಲ. ಗ್ರಾಮೀಣ ಪ್ರದೇಶಗಳ ಜನರು ಸಮರ್ಪಕ ವಿದ್ಯುತ್ ಸೌಕರ್ಯವಿಲ್ಲದೆ ಕಗ್ಗತ್ತಲ್ಲಿ ಬದುಕುತ್ತಿದ್ದಾಗ ನಮ್ಮ ಸಂಘಟನೆಗಳ ಹೋರಾಟದ ಫಲವಾಗಿ ಸರ್ಕಾರ ಭಾಗ್ಯಜ್ಯೋತಿ ಯೋಜನೆಯನ್ನು ಜಾರಿಗೊಳಿಸಿತು. ಆದರೆ ಈ ಯೋಜನೆಯ ಫಲಾನುಭವಿಗಳ ಮನೆಗಳಿಗೆ ಮೀಟರ್ ಅಳವಡಿಸಿ, ಬಿಲ್ ವಿಪರೀತ ಬರುತ್ತಿದೆಯೆಂದು ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ಮತ್ತೆ ಬಡ ಕುಟುಂಬಗಳನ್ನು ಕತ್ತಲೆಯಲ್ಲಿ ಬದುಕುವಂತೆ ಮಾಡುತ್ತಿ ದ್ದಾರೆ ಎಂದು ದೂರಿದರು.

ಎರಡು ಕೋಟಿ ಉದ್ಯೋಗ ಸೃಷ್ಟಿಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಉದ್ಯೋಗಳನ್ನು ನಾಶಪಡಿಸಿ ಯುವ ಪೀಳಿಗೆಯನ್ನು ಬೀದಿಪಾಲು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸಲು ತಹಸೀಲ್ದಾರ್ ಹೊರಗೆ ಬಾರದಿದ್ದಾಗ ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸ್ ಭದ್ರತೆಯನ್ನು ಲೆಕ್ಕಿಸದೆ ತಾಲೂಕು ಕಚೇರಿ ಒಳಗೆ ಪ್ರವೇಶಿಸಿ ತಹಸೀಲ್ದಾರ್ ಕೊಠಡಿ ಮುಂಭಾಗ ಧರಣಿ ಮುಂದುವರಿಸಿದರು.

ಕೂಡಲೇ ತಹಸೀಲ್ದಾರ್ ಚಂದ್ರಮೌಳಿ ಸ್ಥಳಕ್ಕಾಗಮಿಸಿ ಧರಣಿ ನಿರತರನ್ನು ಮನವೊಲಿಸುವುದರ ಜತೆಗೆ ಮನವಿ ಸ್ವೀಕರಿಸಿ ಸಮಸ್ಯೆಗಳ ನಿವಾರಣೆಗೆ ಕ್ರಮ ವಹಿಸು ವುದಾಗಿ ಭರವಸೆ ನೀಡಿದರು. ಸಂಘಟನೆ ಮುಖಂಡರಾದ ಭರತ್‌ರಾಜ್, ಲಿಂಗರಾಜಮೂರ್ತಿ, ತಿಮ್ಮೇಗೌಡ, ಸುಶೀಲಾ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net