ಪಾಲಿಕೆಯ ಸಿಬ್ಬಂದಿಯಿಂದ ಪ್ರತಿಭಟನೆ, ಕಾಯಂ ನೇಮಕಾತಿಗೆ ಆಗ್ರಹ

PALIKE DRIVERS
ವಿಜಯಪುರ ಜಿಲ್ಲಾಡಳಿತಕ್ಕೆ ಮಹಾನಗರ ಪಾಲಿಕೆ ವಾಹನ ಚಾಲಕರ ಮತ್ತು ನಿರ್ವಾಹಕರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಅಧ್ಯಕ್ಷ ಶಂಕರ ಹು. ಚಲವಾದಿ, ಹುಸನಪ್ಪ ಬಿ.ಚಲವಾದಿ, ಪ್ರವೀಣ ಅ. ಕಳ್ಳಿಮನಿ ಮತ್ತಿತರರಿದ್ದಾರೆ.
Published on

ವಿಜಯಪುರ: ವಾಹನ ಚಾಲಕರು ಮತ್ತು ನಿರ್ವಾಹಕರು ಸೇರಿದಂತೆ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಮಹಾನಗರ ಪಾಲಿಕೆಯ ಸಿಬ್ಬಂದಿ ಸೇವೆಯನ್ನು ಕಾಯಂ ಮಾಡಿಕೊಳ್ಳಲು ಆಗ್ರಹಿಸಿ ಗುರುವಾರ ಪ್ರತಿಭಟನೆ ನಡೆಸಿದ ಪಾಲಿಕೆ ಸಿಬ್ಬಂದಿ ಜಿಲ್ಲಾಡಳಿತದ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.

ವಿಜಯಪುರ ಮಹಾನಗರ ಪಾಲಿಕೆ ವಾಹನ ಚಾಲಕರ ಮತ್ತು ನಿರ್ವಾಹಕರ ಕ್ಷೇಮಾಭಿವೃದ್ದಿ ಸಂಘದ ನೇತೃತ್ವ ಕೆಲ ಕಾಲ ಪ್ರತಿಭಟನೆ ನಡೆಸಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು. ಬಳಿಕ ಮನವಿ ಸಲ್ಲಿಸಿ ಹಕ್ಕೊತ್ತಾಯ ಮಂಡಿಸಲಾಯಿತು.

ಸಂಘದ ಅಧ್ಯಕ್ಷ ಶಂಕರ ಹು. ಚಲವಾದಿ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಚಾಲಕ, ನಿರ್ವಾಹನಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಸೇವಾ ಭದ್ರತೆಯಿಲ್ಲದೇ ನಲುಗಿದ್ದಾರೆ. ಹೀಗಾಗಿ ಎಲ್ಲ ನೌಕರರನ್ನು ಕಾಯಂ ಎಂದು ಪರಿಗಣಿಸಬೇಕೆಂದರು.

ಮುಂದುವರಿದು ಸಮಾನ ಕೆಲಸಕ್ಕೆ ಸಮಾನ ವೇತನ ಪೂರೈಸಬೇಕು. ತ್ಯಾಜ್ಯ ವಿಲೇವಾರಿ ಚಾಲಕರನ್ನು ಪೌರಕಾರ್ಮಿಕರೆಂದು ಪರಿಗಣಿಸಬೇಕು. ಚಾಲಕರಿಗೆ ವಾರದ ರಜೆ ನೀಡಬೇಕು. ಕೆಲಸದ ಅವಧಿಯಲ್ಲಿ ತ್ಯಾಜ್ಯ ವಾಹನ ಚಾಲಕರು 8 ಗಂಟೆಗಳಗಿಂತಲೂ ಹೆಚ್ಚಿನ ಕೆಲಸ ನಿರ್ವಹಿಸಿದ್ದು ಅವರಿಗೆ ಹೆಚ್ಚುವರಿ ವೇತನ ನೀಡಬೇಕು. ಎಲ್‌ಐಸಿ ಪಾಲಿಸಿ ಮೊತ್ತ ಹೆಚ್ಚಿಸಬೇಕು. ಕೆಲಸದ ಅವಧಿಯಲ್ಲಿ ಅಪಘಾತ ಸಂಭವಿಸಿದರೆ 10 ಲಕ್ಷ ರೂ.ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಉಪಾಧ್ಯಕ್ಷ ಹುಸನಪ್ಪ ಬಿ.ಚಲವಾದಿ, ಕಾರ್ಯದರ್ಶಿ ಪ್ರವೀಣ ಅ. ಕಳ್ಳಿಮನಿ, ಖಜಾಂಚಿ ಮೋಸಿನಖಾನ ಆಲಮೇಲ, ಸಂಚಾಲಕ ಅಲ್ಪರ ಅತ್ತಾರ, ತನ್ವೀರ ಗುಲ್ಪರೋಷ, ಪರಶುರಾಮ ಬೋರಗಿ, ರುಕ್ಮೋದ್ಧೀನ ಹೊನವಾಡ, ರಮೇಶ ರಾಠೋಡ, ಸುರೇಶ ಕನ್ನೂರ, ದಿಲೀಫ ರಣದೇವಿ, ಸತೀಶ ಚಲವಾದಿ, ಶಿವಾಜಿ ಚವ್ಹಾಣ, ಶಕೀಲ ಬಕ್ಷಿ, ಶಿವಾಜಿ ದುರ್ಗಮುರಗಿ, ಕೂಸಪ್ಪ ಹಂಚಿನಾಳ, ಭೀಮು ಗೊಲ್ಲರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net