

ನಂಜನಗೂಡು: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಎಸ್‌ಸಿಪಿ ಹಾಗೂ ಟಿಎಸ್‌ಪಿ ಅನುದಾನವನ್ನು ಬಳಕೆ ಮಾಡಿಕೊಳ್ಳುವ ಮೂಲಕ ಪರಿಶಿಷ್ಟ ಸಮುದಾಯದ ಜನರಿಗೆ ವಂಚನೆ ಮಾಡುತ್ತಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಕಾರ್ಯಕರ್ತರು ಶುಕ್ರವಾರ ನಗರದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಮಿನಿ ವಿಧಾನಸೌಧ ಆವರಣದಲ್ಲಿರುವ ತಾಲೂಕು ಕಚೇರಿ ಮುಂಭಾಗ ಸಂಘಟಿತರಾದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆ ಅಧ್ಯಕ್ಷ ಮಂಜು ಶಂಕರಪುರ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರ ಬೆಂಬಲ ಪಡೆದುಕೊಂಡು 2023ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಂತರ ದಲಿತರಿಗಾಗಿ ಮೀಸಲಿಟ್ಟಿರುವ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಿಸಿಕೊಂಡು ಸಮುದಾಯದ ಜನರನ್ನು ವಂಚಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಲ್ಲ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅನುದಾನದ ನೆರವು ನೀಡಿಲ್ಲ ಹಾಗೂ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಜಾರಿಗೊಳಿಸಿಲ್ಲ. ಆದ್ದರಿಂದ ಸರ್ಕಾರದ ವಿರುದ್ಧ ಜನರು ಅಸಮಾಧಾನಿತರಾಗಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿಗೆ ಮನವಿ ಮಾಡಿರುವ ಪತ್ರವನ್ನು ತಹಶೀಲ್ದಾರ್‌ರಿಗೆ ಹಸ್ತಾಂತರಿಸುವ ಮೂಲಕ ಪ್ರತಿಭಟನೆ ಅಂತ್ಯಗೊಸಲಾಯಿತು. ಪ್ರತಿಭಟನೆಯಲ್ಲಿ ಸಂಘಟನೆ ಗೌರವಾಧ್ಯಕ್ಷ ಗೀಕಳ್ಳಿ ಮಹದೇವಸ್ವಾಮಿ, ಕಂದೇಗಾಲ ಶಿವಣ್ಣ, ಉಪಾಧ್ಯಕ್ಷ ಎಂ.ರಾಜಶೇಖರ್, ಕಾರ್ಯಾಧ್ಯಕ್ಷ ನಾಗೇಂದ್ರ ಬಸವಟ್ಟಿಗೆ, ಪ್ರಧಾನ ಕಾರ್ಯದರ್ಶಿ ಆಲತ್ತೂರು ಶಿವರಾಜು, ಜೆ.ಮಹದೇವಕುಮಾರ್, ರಾಜೇಶ್ ಹರದನಹಳ್ಳಿ, ಸಿದ್ಧರಾಜು ಹುಸ್ಕೂರು, ಡಿ.ಪ್ರಭುಸ್ವಾಮಿ, ಶಿವಸ್ವಾಮಿ, ಬಿ.ಆರ್.ಮಹದೇವಸ್ವಾಮಿ, ದೇವರಸನಹಳ್ಳಿ ಮಹದೇವಸ್ವಾಮಿ, ಮೂಡಹಳ್ಳಿ ಮಹದೇವು, ಮಹದೇವಸ್ವಾಮಿ, ಗಟ್ಟವಾಡಿ ಮಹೇಶ್, ಮುಳ್ಳೂರು ಸ್ವಾಮಿ, ಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.