ಶಿಕಾರಿಪುರ: ಅಂಗನವಾಡಿ ಕೇಂದ್ರಗಳ ಮುಚ್ಚದಂತೆ ಆಗ್ರಹಿಸಿ ಕಟ್ಟಡ ಕಾರ್ಮಿಕರ ಪ್ರತಿಭಟನೆ

25 ಎಸ್ಕೆಪಿ 1
ಕಾರ್ಮಿಕ ಇಲಾಖೆ ಅಡಿ ಆರಂಭಿಸಿರುವ ಅಂಗನವಾಡಿ ಕೇಂದ್ರಗಳನ್ನು ನಿಲ್ಲಿಸಬಾರದೆಂದು ಆಗ್ರಹಿಸಿ ಕಟ್ಟಡ ಕಾರ್ಮಿಕರು ಶಿಕಾರಿಪುರದಲ್ಲಿ ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ಅವರಿಗೆ ಮನವಿ ಸಲ್ಲಿಸಿದರು. ಸುಂದರ್‌ಬಾಬು, ಮಹದೇವ್ ಆಚಾರ್, ರವಿಕುಮಾರ್, ಪ್ರಭು ಮೇಸ್ತ್ರಿ ಇತರರಿದ್ದರು.
Published on

ಶಿಕಾರಿಪುರ: ಕಾರ್ಮಿಕ ಇಲಾಖೆಯು ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಆರಂಭಿಸಿರುವ ಅಂಗನವಾಡಿ ಕೇಂದ್ರಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಆಗ್ರಹಿಸಿ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಸುಂದರ್‌ಬಾಬು ಮಾತನಾಡಿ, ಶಿಕಾರಿಪುರದಲ್ಲಿ ಮೂರು, ಮುಗಳಗೆರೆ ಮತ್ತು ಸೊರಬದಲ್ಲಿ ತಲಾ ಒಂದು ಅಂಗನವಾಡಿಗಳನ್ನು ಆರಂಭಿಸಲಾಗಿತ್ತು. ಇವುಗಳು ಚೆನ್ನಾಗಿ ನಡೆಯುತ್ತಿವೆ. ಇವುಗಳಿಂದ ನಮ್ಮ ಮಕ್ಕಳಿಗೆ ಅನುಕೂಲವಾಗಿದ್ದು ಅವುಗಳನ್ನು ನಿಲ್ಲಿಸುತ್ತಾರೆ ಎಂಬ ಸುದ್ದಿಯಿದೆ. ಯಾವುದೇ ಕಾರಣಕ್ಕೂ ಇವುಗಳನ್ನು ನಿಲ್ಲಿಸದೇ ಮುಂದುವರಿಸಬೇಕು. ಈ ಬಗ್ಗೆ ಸ್ಥಳೀಯ ಶಾಸಕರೂ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಸಮಾಲೋಚನೆ ಮಾಡುತ್ತೇವೆ ಎಂದರು.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಬರುತ್ತಿದ್ದ ಪ್ರೋತ್ಸಾಹಧನ ನಿಲ್ಲಿಸಲಾಗಿದೆ, ಅದನ್ನು ಮತ್ತೆ ನೀಡಬೇಕು. ಈಗಾಗಲೇ ಶಿಕಾರಿಪುರದಲ್ಲಿ ಕಟ್ಟಡ ಕಾರ್ಮಿಕರ ಭವನವನ್ನು ನಿರ್ಮಿಸಲು ಮನವಿ ಮಾಡಲಾಗಿದ್ದು ಅದರ ಬಗ್ಗೆ ಗಮನಹರಿಸಬೇಕು. ಶಿಕಾರಿಪುರದಲ್ಲಿ ಕಟ್ಟಡ ಕಾರ್ಮಿಕರಿಗಾಗಿ ಆಸ್ಪತ್ರೆ ನಿರ್ಮಿಸಬೇಕು, ಅನಗತ್ಯ ಕಾರಣಗಳಿಂದ ನಿಲ್ಲಿಸಿದ ಕಟ್ಟಡ ಕಾರ್ಮಿಕರ ಕಾರ್ಡ್‌ಗಳನ್ನು ನವೀಕರಣಗೊಳಿಸಬೇಕು, ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಸಂಘದ ವತಿಯಿಂದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಂಘದ ಗೌರವಾಧ್ಯಕ್ಷ ಮಹದೇವ್ ಆಚಾರ್, ಗ್ರಾಮಾಂತರ ಅಧ್ಯಕ್ಷ ಸಂಜೀವ್, ಶಿಕಾರಿಪುರ ತಾಲೂಕು ಅಧ್ಯಕ್ಷರಾದ ಮುನಿರತ್ನಂ, ರೆಹಮಾನ್, ಕಾರ್ಯದರ್ಶಿ ರವಿಕುಮಾರ್, ಸೊರಬ ತಾಲೂಕು ಅಧ್ಯಕ್ಷ ಪ್ರಭು ಮೇಸ್ತ್ರಿ, ಸತೀಶ್, ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net