ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅಪಪ್ರಚಾರದ ಆರೋಪ: ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

Protest by Congress Workers Mandya
oppo_0
Published on

ಮಂಡ್ಯ: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜಕೀಯ ಹೇಳಿಕೆಯನ್ನು ಸಹಿಸದ ಬಿಜೆಪಿ ನಾಯಕರು ಅಪಪ್ರಚಾರವನ್ನು ಮಾಡುತ್ತಾ ರಾಜೀನಾಮೆ ಕೇಳುತ್ತಿದ್ದಾರೆಂದು ಆರೋಪಿಸಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಮಟೆ ಚಳವಳಿ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ಜಮಾಯಿಸಿದ ಕಾರ್ತಕರ್ತರು, ಕೆಲ ಸಮಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬಿಜೆಪಿ ನಾಯಕರ ಪ್ರತಿಕೃತಿ ದಹಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ವಿವಿಧ ಹಗರಣಗಳನ್ನು ಬಯಲಿಗೆಳೆಯುವಲ್ಲಿ ಪ್ರಿಯಾಂಕ್ ಖರ್ಗೆ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಸಂಘ ಪರಿವಾರದ ನಿಲುವುಗಳನ್ನು ಖಂಡಿಸುತ್ತಾ, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಹೋರಾಡುತ್ತಿದ್ದು, ಈ ಕಾರಣಕ್ಕಾಗಿ ಬಿಜೆಪಿ ನಾಯಕರು ಅವರನ್ನು ಗುರಿಯಾಗಿಸಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಐಟಿ, ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಉತ್ತಮ ಕಾರ್ಯವನ್ನು ಮಾಡುತ್ತಿದ್ದರೂ, ಬಿಜೆಪಿಯ ದಲಿತ ಮುಖಂಡರನ್ನೇ ಪ್ರಿಯಾಂಕ್ ಖರ್ಗೆ ವಿರುದ್ಧ ಎತ್ತಿ ಕಟ್ಟುತ್ತಾ ಮತ್ತು ಅವರನ್ನು ಅವಮಾನಿಸುವ ಮತ್ತು ರಾಜಕೀಯವಾಗಿ ಅಸ್ತಿರಗೊಳಿಸುವ ಷಡ್ಯಂತ್ರವನ್ನು ಬಿಜೆಪಿ ಮಾಡುತ್ತಿದೆ. ಇದು ಹೀಗೇ ಮುಂದುವರಿದರೆ ರಾಜ್ಯಾದ್ಯಂತ ಶೋಷಿತ ಸಮುದಾಯಗಳು ಹೋರಾಟ ನಡೆಸಲಿವೆ ಎಂಬ ಎಚ್ಚರಿಕೆಯನ್ನು ಪ್ರತಿಭಟನಾಕಾರರು ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿ ಮುಖಂಡರು ಸರ್ಕಾರ ಪತನದ ಅಪಪ್ರಚಾರವನ್ನು ಮಾಡಿಕೊಂಡು ಬಂದಿದ್ದಾರೆ. ಪ್ರತಿದಿನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅಥವಾ ಸಚಿವರ ರಾಜೀನಾಮೆ ಕೇಳುವುದನ್ನೇ ವೃತ್ತಿ ಮಾಡಿಕೊಂಡು ಅದನ್ನೇ ವಿರೋಧ ಪಕ್ಷದ ಕಾರ್ಯವೆಂದು ಪರಿಗಣಿಸಿದ್ದಾರೆ. ಇದಕ್ಕೆ ರಾಜ್ಯದ ಜನ ಉಪ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀಡಿದ್ದಾರೆಂದು ಎಚ್ಚರಿಸಿದರು.

ರಾಜ್ಯದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸುಧಾರಣೆಯನ್ನು ತರುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಪ್ರಿಯಾಂಕ್ ಖರ್ಗೆ ಅವರು, ಸಚಿವ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸುವುದರ ಜತೆಗೆ ಕೋಮುವಾದಿ ಶಕ್ತಿಗಳ ವಿರುದ್ಧ ದಿಟ್ಟತನದಿಂದ ಹೋರಾಟ ನಡೆಸುತ್ತಿದ್ದಾರೆ. ಅವರ ನಿಲುವು ಮತ್ತು ಪ್ರಾಬಲ್ಯವನ್ನು ಸಹಿಸದ ಬಿಜೆಪಿಯ ಮುಖಂಡರು ಅನಗತ್ಯವಾಗಿ ವಿವಾದಗಳನ್ನು ಸೃಷ್ಠಿಸುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಪಾಂಚಾಳ್ ಅವರ ಡೆತ್‌ನೋಟ್‌ನಲ್ಲಿ ಸಚಿವರ ಹೆಸರಿಲ್ಲದಿದ್ದರೂ, ಅವರ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ದೂರಿದರು.

ವಿವಿಧ ಸಂಘಟನೆಗಳ ಮುಖಂಡರಾದ ಡಾ.ಮೂರ್ತಿ, ಸುಂಡಹಳ್ಳಿ ಮಂಜುನಾಥ್, ಎಲ್.ಸಂದೇಶ್, ಶ್ರೀಧರ್, ಸಿ.ಆರ್. ರಮೇಶ್, ಎಚ್.ಡಿ.ಜಯರಾಂ, ಹಾಲಹಳ್ಳಿ ರುದ್ರಪ್ಪ, ವೀಣಾ ಶಂಕರ್, ಅಮ್ಜದ್‌ಪಾಷ, ಉಷಾ, ದೊಡ್ಡಯ್ಯ, ಆನಂದ್, ವಿಜಯಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net