

ಹುಬ್ಬಳ್ಳಿ: ಇಂಧನ ಹಾಗೂ ಅನಿಲ ದರ ಏರಿಕೆ ಖಂಡಿಸಿ ಧಾರವಾಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದಿಂದ ನಗರದ ಕಾರವಾರ ರಸ್ತೆಯಲ್ಲಿನ ಕಾಂಗ್ರೆಸ್ ಕಚೇರಿ ಮುಂದೆ ಶನಿವಾರ ವಿನೂತನ ಪ್ರತಿಭಟನೆ ನಡೆಯಿತು.
ರಸ್ತೆಯಲ್ಲಿ ಚಪಾತಿ ಹಿಟ್ಟು ತಟ್ಟಿ ಸೌದೆ ಒಲೆ ಮೇಲೆ ಚಪಾತಿ ಸುಡುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಹೊತ್ತು ಸಂಚಾರ ತಡೆದು ಪ್ರತಿಭಟಿಸಿದರು.
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಎಲ್ಲ ವಸ್ತುಗಳ ಬೆಲೆ ಏರಿಸುವ ಮೂಲಕ ಜನರ ಜೀವನದ ಜತೆಗೆ ಚಲ್ಲಾಟವಾಡುತ್ತಿದೆ. ನಿತ್ಯ ಬಳಕೆಯ ವಸ್ತುಗಳನ್ನೂ ಖರೀದಿ ಮಾಡದಷ್ಟು ಜನರನ್ನು ಅಶಕ್ತಗೊಳಿಸಿದೆ. ಸಬಲೀಕರಣದ ಹೆಸರು ಹೇಳುವ ಯೋಗ್ಯತೆಗೆ ಬಿಜೆಪಿಗೆ ಇಲ್ಲ. ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣಕ್ಕೆ ವಿನೂತನ ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನು ಸಹಿಸಿಕೊಳ್ಳಲಾಗದೇ ಬಿಜೆಪಿಯವರು ಕಾಂಗ್ರೆಸ್ ಸರ್ಕಾರಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ಮುಖಂಡರಾದ ದೀಪಾ ಗೌರಿ, ಧ್ರುತಿ ಸಾಲಮನಿ, ಗಂಗವ್ವ ಕರಿಗಾರ, ಕಸ್ತೂರಿ ಕಟ್ಟಿಮನಿ, ಯಾಸ್ಮಿನ್ ಗುಡಗಿ, ಸ್ನೇಹಾ ಕಿತ್ತೂರ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.