

ಮೈಸೂರು: ಶಾಸಕರಾದ ತನ್ವೀರ್ ಸೇಠ್ ಹಾಗೂ ಪ್ರಿಯಾಂಕ ಖರ್ಗೆ ಅವರಿಗೆ ಜೀವಬೆದರಿಕೆ ಹಾಕಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಭಾನುವಾರ ಪ್ರತಿಭಟನೆ ನಡೆಯಿತು.
ನಗರದ ಎಫ್‌ಟಿಎಸ್ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೊಲೆ ಬೆದರಿಕೆ ಹಾಕಿ ಮತೀಯವಾದ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಹಾಸನ ಜಿಲ್ಲೆಯ ಸಕಲೇಶಪುರದ ಬಜರಂಗದಳದ ಕಾರ್ಯಕರ್ತ ರಘು ಸಾರ್ವಜನಿಕ ಭಾಷಣದಲ್ಲಿ ಶಾಸಕ ತನ್ವೀರ್ ಸೇಠ್ ಅವರಿಗೆ ಕೊಲೆ ಬೆದರಿಕೆ ಹಾಗೂ ಜೀವಹಾನಿ ಮಾಡುವ ಬಗ್ಗೆ ಮಾತನಾಡಿದ್ದಾನೆ. ಬಹಿರಂಗವಾಗಿ ಕಾರ್ಯಕ್ರಮದಲ್ಲಿ ಜೀವ ಬೆದರಿಕೆ ಹಾಕಿದ್ದಾನೆ. ಆದ್ದರಿಂದ ರಘು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಾಸಕ ಪ್ರಿಯಾಂಕ ಖರ್ಗೆ ಅವರಿಗೆ ಬಿಜೆಪಿ ಕಾರ್ಯಕರ್ತ ಮಣಿಕಂಠ ರಾಥೋಡ್ ಬಂದೂಕಿನಿಂದ ಶೂಟ್ ಮಾಡಿ ಕೊಲೆ ಮಾಡುತ್ತೇನೆ ಎಂದು ಜೀವಬೆದರಿಕೆ ಹಾಕಿರುವುದು ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ಎಲ್ಲೆಡೆ ಕೂಡ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ಕೋಮುಗಲಭೆ ನಿರಂತರ ನಡೆಯುತ್ತಿದೆ. ಈ ಕೂಡಲೇ ರಘು ಹಾಗೂ ಮಣಿಕಂಠ ರಾಥೋಡ್ ಅವರನ್ನು ಬಂಧಿಸಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ವಕ್ತಾರ ಲಕ್ಷ್ಮಣ್, ಮುಖಂಡರಾದ ಟಿ.ಬಿ.ಚಿಕ್ಕಣ್ಣ, ಎಂ.ಶಿವಣ್ಣ, ಅಯೂಬ್ ಖಾನ್ ಇತರರಿದ್ದರು.