ಪೌರ ನೌಕರರರಿಂದ ಪ್ರತಿಭಟನೆ

1001298992
ಪೌರಕಾರ್ಮಿಕರ ಮುಷ್ಕರ ಹಿನ್ನೆಲೆಯಲ್ಲಿ ಆಲೂರು ಪಟ್ಟಣದಲ್ಲಿ ಪೌರ ಕಾರ್ಮಿಕರು ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು.
Published on

ಆಲೂರು : ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರ ನೌಕರರ ಸಂಘ ಹಾಗೂ ಹೊರಗುತ್ತಿಗೆ ನೌಕರರ ಸಂಘದಿಂದ ಪಟ್ಟಣ ಪಂಚಾಯಿತಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಪೌರ ಸೇವಾ ನೌಕರರ ಸಂಘದ ಮಾಜಿ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಕಾಯಂ ಮಾಡಬೇಕು. ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಸರ್ಕಾರದ ನಿರ್ಲಕ್ಷ್ಯ ಧೋರಣೆ ಸಲ್ಲದು. ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು, ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯವನ್ನು ಪೌರ ನೌಕರರಿಗೂ ಜಾರಿ ಮಾಡಬೇಕು. ಹಲವಾರು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಾಹನ ಚಾಲಕರು, ನೀರು ಸರಬರಾಜು ಸಿಬ್ಬಂದಿ, ಲೋಡರ್ಸ್, ಗುತ್ತಿಗೆ ಲೆಕ್ಕಿಗರು, ಕ್ಲೀನರ್ ಪೌರಕಾರ್ಮಿಕರು, ಸೂಪರ್ ವೈಸರ್ಸ್, ಕಂಪ್ಯೂಟರ್ ಆಪರೇಟರ್‌ಗಳು, ಜೂನಿಯರ್ ಪ್ರೋಗ್ರಾಸ್ ಸಿಬ್ಬಂದಿಯನ್ನು ಕಾಯಂ ಮಾಡಬೇಕು. ಸ್ವಚ್ಛತೆ, ಕಸ ಸಂಗ್ರಹ, ವಿಲೇವಾರಿ, ನೀರು ಪೂರೈಕೆ ಮತ್ತು ಒಳಚರಂಡಿ ನಿರ್ವಹಣೆ ಸ್ಥಗಿತ ಮಾಡುವ ಮೂಲಕ ಪ್ರತಿಭಟಿಸುತ್ತಿದ್ದೇವೆ. ಎಲ್ಲ ನೌಕರರಿಗೂ ಎಸ್‌ಎಫ್‌ಸಿ ಮುಕ್ತನಿಧಿಯಿಂದ ವೇತನ ನೀಡಬೇಕು ಎಂದು ಒತ್ತಾಯಿಸಿ ಆಲೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆರ್.ಎಂ ಮೋಹನ್ ರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.

ಪೌರಕಾರ್ಮಿಕರ ಮುಷ್ಕರದಿಂದ ಆಲೂರು ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರು ತಮ್ಮ ಕರ್ತವ್ಯಕ್ಕೆ ಗೌರಾದ ಹಿನ್ನೆಲೆಯಲ್ಲಿ ವಾರದ ಸಂತೆಯ ಕಸ ಸೇರಿದಂತೆ ಮನೆಗಳಲ್ಲಿ ಸಂಗ್ರಹಿಸಿದ ಕಸವನ್ನು ಕೊಂಡೊಯ್ಯದ ಕಾರಣ ಎಲ್ಲೆಡೆ ಅಶುಚಿತ್ವದ ವಾತಾವರಣ ನಿರ್ಮಾಣವಾಗಿತ್ತು.

ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಗಣೇಶ್, ಉಪಾಧ್ಯಕ್ಷೆ ಸುಬ್ಬಮ್ಮ ಕಾರ್ಯದರ್ಶಿ ಲೋಕೇಶ್, ಖಜಾಂಚಿ ಲಲಿತಮ್ಮ, ಪಟ್ಟಣ ಪಂಚಾಯಿತಿ ಕಾರ್ಯಾಲಯದ ಸಿಬ್ಬಂದಿ ಜಯಲಕ್ಷ್ಮೀ, ಉಷಾರಾಣಿ, ದೀಪಿಕಾ, ರಾಜಲಕ್ಷ್ಮೀ, ಭಾರತಿ, ಪೌರಕಾರ್ಮಿಕರಾದ ನಾಗರತ್ನಾ, ರವಿಕುಮಾರ್, ಪುರುಷೋತ್ತಮ್, ಚಿನ್ನ ರಂಗಸ್ವಾಮಿ, ಲಕ್ಷ್ಮಣ್, ಮಂಜುನಾಥ್, ಕೃಷ್ಣೇಗೌಡ, ಪಾಲಾಕ್ಷ, ಶಶಿಕುಮಾರ್ ಸೇರಿದಂತೆ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net