

ಬೆಂಗಳೂರು: ಕರೊನಾದಿಂದ ಮೃತರಾದ ಸಾರಿಗೆ ನೌಕರರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡುವುದು ಸೇರಿ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ (ಸಿಐಟಿಯು) ನೇತೃತ್ವದಲ್ಲಿ ನ. 5ರಂದು ಸ್ವಾತಂತ್ರ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಲಾಕ್ಡೌನ್ ಸಡಿಲಿಕೆ ಬಳಿಕ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದರೂ, ಅವರಿಗೆ ರ್ಪೂಣ ಪ್ರಮಾಣದಲ್ಲಿ ಕೆಲಸ ನೀಡದೆ ಸತಾಯಿಸಲಾಗುತ್ತಿದೆ. ಒಂದು ವೇಳೆ ಕೆಲಸ ಬೇಕೆಂದರೆ, ಘಟಕದ ಅಧಿಕಾರಿಗಳಿಗೆ ಲಂಚ ನೀಡಬೇಕಿದೆ. ಇಲ್ಲದಿದ್ದರೆ, ನೌಕರರಿಗೆ ರಜೆ ನೀಡಲಾಗುತ್ತದೆ. ಅದರ ಜತೆಗೆ ಲಾಕ್ಡೌನ್ ಅವಧಿಯಲ್ಲಿ ವೇತನ ನೀಡುವುದಕ್ಕೆ ನೌಕರರ ರಜೆ ಕಡಿತಗೊಳಿಸಲಾಗಿದೆ. ಹಾಗೆಯೇ, ಹಲವು ಭತ್ಯೆಗಳನ್ನು ರದ್ದು ಮಾಡಲಾಗಿದೆ.
ಇವೆಲ್ಲದಕ್ಕಿಂತ ಮುಖ್ಯವಾಗಿ ಕರೊನಾದಿಂದ ಸಾವಿಗೀಡಾದ ನೌಕರರ ಕುಟುಂಬದವರಿಗೆ 30 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಈ ಹಿಂದೆ ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಘೋಷಿಸಿದ್ದರು. ಆದರೆ, ಈವರೆಗೆ ಅದಕ್ಕೆ ಕ್ರಮ ಕೈಗೊಂಡಿಲ್ಲ. ನೌಕರರಿಗಾಗುತ್ತಿರುವ ದೌರ್ಜನ್ಯ ತಡೆ ಮತ್ತು ಮೃತ ನೌಕರರಿಗೆ ಪರಿಹಾರ ನೀಡಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದ್ದು, ಬಿಎಂಟಿಸಿ, ಕೆಎಸ್ಆರ್ಟಿಸಿ ಸಿಬ್ಬಂದಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ.