ಕಾವೇರಿ ಕ್ರಿಯಾ ಸಮಿತಿಯಿಂದ ಪ್ರತಿಭಟನೆ

9
Published on

ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿರುವುದನ್ನು ಖಂಡಿಸಿ ಕಾವೇರಿ ಕ್ರಿಯಾ ಸಮಿತಿಯಿಂದ ನಡೆಯುತ್ತಿರುವ ಧರಣಿ ಮುಂದುವರಿದಿದ್ದು, ಗುರುವಾರ ಪುರಭವನ ಮುಂಭಾಗದ ದೊಡ್ಡ ಗಡಿಯಾರದ ಬಳಿ ಪ್ರತಿಭಟನೆ ನಡೆಸಲಾಯಿತು.


ವಿಜಯನಗರದ ಪುಣ್ಯಕೋಟಿ ಸೇವಾ ಟ್ರಸ್ಟ್ ಸದಸ್ಯರು ಪ್ರತಿಭಟನೆಗೆ ಬೆಂಬಲ ನೀಡಿ, ಪ್ರತಿಭಟನೆಯಲ್ಲಿ ಭಾಗವಹಿಸಿ ರಾಜ್ಯ, ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕುಡಿಯಲು ನೀರಿಲ್ಲದಿದ್ದರೂ, ತಮಿಳುನಾಡಿನ ಒತ್ತಾಯಕ್ಕೆ ಮಣಿದು ಮೂರನೇ ಬೆಳೆಗೆ ನೀರು ಬಿಡಲು ಆದೇಶಿಸಿರುವುದು ಖಂಡನೀಯ. ತಮಿಳುನಾಡು ಕಾವೇರಿ ಕಣಿವೆಯ ವಸ್ತುಸ್ಥಿತಿ ತಿಳಿದಿದ್ದರೂ ನಮಗೆ ನೀರು ಬಿಡಿ ಎಂದು ಹಠ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.

ಕರ್ನಾಟಕದ 195 ತಾಲೂಕುಗಳು ಬರಪೀಡಿತವಾಗಿದ್ದರೂ ಸರ್ಕಾರ ರೈತರ ನೆರವಿಗೆ ಧಾವಿಸದೆ ನಿರ್ಲಕ್ಷ್ಯವಹಿಸಿದೆ. ತಮಿಳುನಾಡು ಸರ್ಕಾರದ ಒತ್ತಡಕ್ಕೆ ಮಣಿದು ರಾಜ್ಯವನ್ನು ಬಲಿ ಕೊಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಮಧ್ಯಸ್ಥಿಕೆ ವಹಿಸಿ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ನ್ಯಾಯ ಮಂಡಳಿ ರದ್ದು ಮಾಡಿ ರಾಷ್ಟ್ರೀಯ ಜಲ ನೀತಿ ರೂಪಿಸಬೇಕು. ತಮಿಳುನಾಡಿಗೆ ವಸ್ತು ಸ್ಥಿತಿ ತಿಳಿಸಿ ಹೆಚ್ಚು ಮಳೆಯಾದರೆ ಮಾತ್ರ ತಮಿಳುನಾಡಿಗೆ ನೀರು ಬಿಡುವ ಶಾಶ್ವತ ಒಪ್ಪಂದ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾವೇರಿ ಕ್ರಿಯಾ ಸಮಿತಿಯ ಎಂ.ಮೋಹನಕುಮಾರ್‌ಗೌಡ, ಮೂಗೂರು ನಂಜುಂಡಸ್ವಾಮಿ, ಮಹದೇವಸ್ವಾಮಿ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಪುಣ್ಯಕೋಟಿ ಸೇವಾ ಟ್ರಸ್ಟ್ ಅಧ್ಯಕ್ಷ ಹನುಮಂತೇಶ್, ಪದಾಧಿಕಾರಿಗಳಾದ ಮಂಜು, ಭರತ್‌ರಾಜ್, ಪುಟ್ಟಸ್ವಾಮಿ, ರಮೇಶ್, ಮಾಯಣ್ಣ, ಮಂಜು, ಮಲ್ಲೇಶ್, ಸೀತಾರಾಮ್, ಆಶಾ, ಪುಷ್ಪಾವತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net