ಬಿಎಸ್‌ಎನ್‌ಎಲ್ ನೌಕರರ ಒಕ್ಕೂಟದಿಂದ ಪ್ರತಿಭಟನೆ

20
Published on

ಮೈಸೂರು: ಖಾಸಗಿ ಟೆಲಿಕಾಂ ಕಂಪನಿಗಳು ಉನ್ನತೀಕರಣಗೊಳ್ಳುತ್ತಿರುವಾಗ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಮಂದಗತಿಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿ ಬಿಎಸ್‌ಎನ್‌ಎಲ್ ನಾನ್‌ಎಕ್ಸಿಕ್ಯುಟಿವ್ ನೌಕರರ ಒಕ್ಕೂಟದಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ಜಯಲಕ್ಷ್ಮೀಪುರಂನ ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ ನೌಕರರು, ಖಾಸಗಿ ಕಂಪನಿಗಳು ಈಗ 5ಜಿ ಸೇವೆ ಆರಂಭಿಸುತ್ತಿದ್ದರೆ, 2023ರ ವರ್ಷಾರಂಭದಲ್ಲಿಯೇ 4ಜಿ ಆರಂಭಿಸಬೇಕಿದ್ದ ಬಿಎಸ್‌ಎನ್‌ಎಲ್ ಈಗ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
2022 ಹಾಗೂ 23ರಲ್ಲಿ ಹಲವು ಬಾರಿ 4ಜಿ ರೋಲ್ ಔಟ್ ಭರವಸೆ ನೀಡಿದ್ದರೂ ಇನ್ನೂ ಆರಂಭಿಸುವ ಇಚ್ಛಾಶಕ್ತಿ ತೋರುತ್ತಿಲ್ಲ. ಈ ಬಗ್ಗೆ ಕೇಳಿದರೆ ಇನ್ನು 18 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡುತ್ತಾ ಬರಲಾಗುತ್ತಿದೆ ಎಂದು ದೂರಿದರು.
ಇದರಿಂದ ಈ ಆರ್ಥಿಕ ವರ್ಷದಲ್ಲಿ ಬಿಎಸ್‌ಎನ್‌ಎಲ್ ಅನೇಕ ಚಂದಾದಾರರನ್ನು ಕಳೆದುಕೊಂಡಿದೆ. ಖಾಸಗಿ ಕಂಪನಿಗಳು ಟೆಲಿಕಾಂ ಕಂಪನಿ ನಡೆಸದಿದ್ದರೂ 5ಜಿ ಪರವಾನಗಿ ನೀಡಲಾಗಿದೆ. ಈ ಬಗ್ಗೆ ಆಡಳಿತ ಮಂಡಳಿ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
5ಜಿ ಯುಗದಲ್ಲಿ ನಮ್ಮಲ್ಲಿ 4ಜಿ ಸೇವೆಯೂ ಇಲ್ಲ. ಇಂದಿನ ಆಧುನೀಕ ದಿನದಲ್ಲಿ ಆನ್‌ಲೈನ್ ಮೂಲಕ ಅಧ್ಯಯನವೂ ನಡೆಸಬೇಕಾಗಿರುವುದರಿಂದ 3ಜಿ ಹೆಚ್ಚು ಉಪಯೋಗಕ್ಕೆ ಬರುತ್ತಿಲ್ಲ. ಹೀಗಾಗಿ ಕೂಡಲೇ 4ಜಿ ಸೇವೆ ಆರಂಭಿಸಬೇಕು. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾನ್ ಎಕ್ಸಿಕ್ಯುಟಿವ್ ನೌಕರರಿಗೆ 3ನೇ ವೇತನ ಪರಷ್ಕರಣೆ ಮಾಡಿ ಹೊಸ ಬಡ್ತಿ ನೀತಿ ಜಾರಿ ಮಾಡಬೇಕೆಂದು ಒತ್ತಾಯಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನೌಕರರ ಒಕ್ಕೂಟದ ಅಧ್ಯಕ್ಷ ನಾಗೇಂದ್ರ, ಸಂಚಾಲಕ ಪುಟ್ಟಸ್ವಾಮಿ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net