ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ

13ark6
ಸಭೆ ಬಹಿಷ್ಕರಿಸಿ ಕಚೇರಿ ಮುಂದೆ ಧರಣಿ ಕುಳಿತು ಬಿಜೆಪಿ ಸದಸ್ಯರು ಸಭಾ ನಡವಳಿ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
Published on

ಅರಕಲಗೂಡು: ಅಕ್ರಮವಾಗಿ ಹಣ ಮಾಡುವ ದುರುದ್ದೇಶದಿಂದ ಸಭಾ ನಡಾವಳಿಯಲ್ಲಿ ಇಲ್ಲದ ವಿಷಯಗಳನ್ನು ಸೇರಿಸಿಕೊಂಡು ದುರಾಡಳಿತ ನಡೆಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಗುರುವಾರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟಿಸಿದರು.

ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸದಸ್ಯ ರಮೇಶ್ ವಾಟಾಳ್ ಮಾತನಾಡಿ, ಹಿಂದಿನ ಸಭೆಯ ನಡವಳಿಗಳನ್ನು ಓದುವಾಗ ಕೆಲವು ವಿಷಯಗಳನ್ನು ಸರ್ವಾಮತದಿಂದ ತೀರ್ಮಾನಿಸಲಾಗಿದೆ ಹೇಳಲಾಗುತ್ತಿದೆ. ಆದರೆ ಹಿಂದಿನ ಸಭೆಯಲ್ಲಿ ನಿರ್ಣಯವನ್ನೇ ಕೈಗೊಳ್ಳದ ವಿಷಯಗಳಿಗೆ ಅನುಮೋದನೆ ನೀಡಲಾಗುತ್ತಿದೆ. ಅಧಿಕಾರಿಗಳು ಅನುಕೂಲವಾಗುವಂತೆ ಬರೆದುಕೊಂಡು, ಈಗ ಅಧ್ಯಕ್ಷರ ಅಪ್ಪಣೆ ಮೇರೆಗೆ ಸಭೆಯಲ್ಲಿ ಚರ್ಚೆಗೆ ಬಂದಿತ್ತು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು. ಇದೇ ವೇಳೆ ಇವರ ಹೇಳಿಕೆಗೆ ದನಿಗೂಡಿಸಿದ ಸದ್ಯರು ಇದಕ್ಕೆ ಒಪ್ಪಿಗೆ ಇಲ್ಲ ಎಂದು ಕೆಲ ಘೋಷಣೆ ಕೂಗುತ್ತ ಸಭಾತ್ಯಾಗ ಮಾಡಿ ಹೊರನಡೆದರು. ಬಳಿಕ ಕಚೇರಿ ಮುಂಭಾಗ ಕುಳಿತು ಪ್ರತಿಭಟನೆ ನಡೆಸಿದರು.

ಸದಸ್ಯೆರಶ್ಮಿ ಮಾತನಾಡಿ, ಮನಸ್ಸೋ ಇಚ್ಛೆ ಏಕಪಕ್ಷೀಯವಾಗಿ ಸಭೆ ನಡೆಸಲಾಗುತ್ತಿದೆ. ಸಂತೆಮರೂರು ಸರ್ಕಲ್‌ನಲ್ಲಿ ಕ್ಷೀರ ಕೇಂದ್ರ ತೆರೆದು ಒಂದು ಸಾವಿರ ರೂ. ನೆಲ ಬಾಡಿಗೆ ನೀಡಲು ಮುಂದಾಗಿದ್ದಾರೆ. ಈ ವಿಷಯ ಹಿಂದಿನ ಸಭೆಯಲ್ಲಿ ಮಂಡನೆಯಾಗಿಲ್ಲ, ಕೇಳಿದರೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಲಾಗುತ್ತಿದೆ ಎನ್ನುವ ಉತ್ತರ ನೀಡಲಾಗುತ್ತದೆ. ಅಧಿಕಾರಿಗಳು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ ಹೊರತು ಪಾರದರ್ಶಕ ಆಡಳಿತ ನಡೆಸುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸದಸ್ಯ ನಿಖಿಲ್ ಮಾತನಾಡಿ, ಇಂದು ನಡೆದ ಸಭೆಯಲ್ಲಿ ಕೆಲವು ವಿಷಯಗಳು ಪ್ರಸ್ತಾಪಿಸಿದಾಗ ಕಳೆದ ಸಭೆಯಲ್ಲಿ ಬಂದ ವಿಚಾರಗಳನ್ನು ಇಟ್ಟಿದ್ದಾರೆ. ಇವತ್ತಿನ ಸಭೆಯಲ್ಲಿ 4 ವಿಷಯ ನೀಡಿದ್ದು, ಅದರಲ್ಲೂ ಮುಖ್ಯಾಧಿಕಾರಿ ಸಹಿ ಇರಲಿಲ್ಲ. ಸಭೆಯಲ್ಲಿ ಚರ್ಚೆಯಾದ ವೇಳೆ ಕೆಲವು ವಿಷಯಕ್ಕೆ ಮಾತ್ರ ಒಪ್ಪಿಗೆ ನೀಡಿರುತ್ತೇವೆ. ಆದರೆ ಮುಂದಿನ ಸಭೆ ವೇಳೆಗೆ ಅವರಿಗೆ ಅನುಕೂಲವಾಗುವಂತೆ ಇನ್ನಷ್ಟು ವಿಷಯ ಸೇರಿಸಿ ಮುಖ್ಯಧಿಕಾರಿಗಳ ಸಹಿ ಪಡೆದು ಕೆಲವು ಸದಸ್ಯರಿಗೆ ನೀಡಿ, ಸಭೆಯಲ್ಲಿ ಚರ್ಚೆಗೆ ತಂದು ಸರ್ವಾನುಮತದ ತೀರ್ಮಾನ ಎಂದು ಬರೆದುಕೊಳ್ಳುತ್ತಾರೆ.

ಇದನ್ನು ವಿರೋಧಿಸಿ ನಾಲ್ವರು ಸದಸ್ಯರು ಸಾಮಾನ್ಯ ಸಭೆಯಿಂದ ಹೊರಬಂದಿದ್ದೇವೆ. ಬಹುಮತ ಇದೆ ಎಂದು ಸಭೆಯನ್ನು ಮುಂದುವರೆಸಿದ್ದಾರೆ. ಈ ಸಭೆಗೆ ನಮ್ಮ ಒಪ್ಪಿಗೆ ಇಲ್ಲ. ಈ ಸಭೆಯಲ್ಲಿ ಏನೇ ತೀರ್ಮಾನ ಕೈಗೊಂಡರೂ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net