

ಪಾಂಡವಪುರ: ಅಧ್ವಾನಗೊಂಡಿರುವ ಪಾಂಡವಪುರ-ಮಂಡ್ಯ ಮುಖ್ಯರಸ್ತೆ ಮತ್ತು ಮಡಿಕೆಪಟ್ಟಣ ಗೇಟ್‌ನಿಂದ ಚಿಕ್ಕಮರಳಿ, ನುಗ್ಗಹಳ್ಳಿ ಗ್ರಾಮದ ಸಂಪರ್ಕ ರಸ್ತೆ ಡಾಂಬರೀಕರಣಗೊಳಿಸುವಂತೆ ಆಗ್ರಹಿಸಿ ಚಿಕ್ಕಮರಳಿ ಗ್ರಾಮಸ್ಥರು ರಾಜ್ಯ ಹೆದ್ದಾರಿ ವಾಹನ ಸಂಚಾರ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಮಡಿಕೆಪಟ್ಟಣ ಗೇಟ್‌ಬಳಿ ಜಮಾಯಿಸಿದ ಪ್ರತಿಭಟನಾಕಾರರು, ರಸ್ತೆ ಡಾಂಬರೀಕರಣ ಮಾಡಲು ವಿಫಲರಾಗಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶವ್ಯಕ್ತಪಡಿಸಿದರು.
ಪಾಂಡವಪುರ-ಮಂಡ್ಯ ಮುಖ್ಯರಸ್ತೆ ಚಿಕ್ಕಮರಳಿ ಗೇಟ್ ಬಳಿ ಗುಂಡಿ ಬಿದ್ದಿರುವ ಪರಿಣಾಮ ವಾಹನಗಳ ಸಂಚಾರ ದುಸ್ತರವಾಗಿದೆ. ಹಲವು ವರ್ಷಗಳಿಂದಲೂ ರಸ್ತೆ ಗುಂಡಿ ಬಿದ್ದಿರುವ ಹಲವು ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಸಾಕಷ್ಟು ಘಟನೆ ಸಂಭವಿಸಿದೆ. ಆದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದೆ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಅಧಿಕಾರಿಗಳು ಗುಂಡಿ ಬಿದ್ದಿರುವ ರಸ್ತೆ ಡಾಂಬರೀಕರಣಗೊಳಿಸುವುದನ್ನು ಬಿಟ್ಟು ಅಚ್ಚುಕಟ್ಟಾಗಿರುವ ರಸ್ತೆಗೆ ಡಾಂಬರೀಕರಣ ಮಾಡುವ ಮೂಲಕ ಅವೈಜ್ಞಾನಿಕ ಕಾಮಗಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಡಿಕೆಪಟ್ಟಣದ ಗೇಟ್ ಬಳಿಯಿಂದ ಚಿಕ್ಕಮರಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ರಸ್ತೆಯನ್ನು ಗುಂಡಿಗಳೇ ಆವರಿಸಿವೆೆ. ಇದರಿಂದ ಈ ಮಾರ್ಗವಾಗಿ ಸಂಚರಿಸುವ ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಜತಗೆ ರಸ್ತೆಯ ಇಕ್ಕೆಲಗಳು ಒತ್ತುವರಿಯಾಗಿದ್ದು, ಕೆಲವರು ಒತ್ತುವರಿ ಜಾಗದಲ್ಲಿ ಸೀಮೆಕಡ್ಡಿ ಬೆಳೆಯುತ್ತಿದ್ದಾರೆ. ಇದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸಂಬಂಧಿಸಿದ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ಅಧಿಕಾರಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಗುಂಡಿ ಬಿದ್ದಿರುವ ರಸ್ತೆಯ ದರ್ಶನ ಮಾಡಿಸಿ ತಕ್ಷಣ ರಸ್ತೆ ದುರಸ್ತಿ ಮಾಡಿಸುವಂತೆ ಮನವಿ ಪತ್ರ ನೀಡಿದರು.
ಮನವಿ ಸ್ವೀಕರಿಸಿದ ಲೋಕೋಪಯೋಗಿ ಎಇಇ ಜೈಕುಮಾರ್ ಮಾತನಾಡಿ, ಮಂಡ್ಯ ಮುಖ್ಯರಸ್ತೆಯಲ್ಲಿ ಬಿದ್ದಿರುವ ಗುಂಡಿ ಮುಚ್ಚಿಸಲು ಅನುದಾನ ಬಿಡುಗಡೆಯಾಗಿದೆ. ಗುಂಡಿ ಜಾಗದಲ್ಲಿ ಡಾಂಬರೀಕರಣ ಮಾಡಲಾಗುವುದು, ಇನ್ನು ಚಿಕ್ಕಮರಳಿ ಗ್ರಾಮದ ರಸ್ತೆ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಬಳಿಕ ರಸ್ತೆಯನ್ನು ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಸಚಿಕ್ಕಮರಳಿ ಗ್ರಾಮದ ಮುಖಂಡರಾದ ತಾಪಂ ಮಾಜಿ ಸದಸ್ಯೆ ಮಂಗಳಾ ನವೀನ್ ಕುಮಾರ್, ಗ್ರಾಪಂ ಉಪಾಧ್ಯಕ್ಷ ಈರಾಚಾರಿ, ಸುರೇಂದ್ರ, ವಿಶ್ವನಾಥ್, ಪ್ರವೀಣ್, ಸತೀಶ್, ಪಾಂಡಿದೊರೆ, ನವೀನ್ ಕುಮಾರ್, ಚನ್ನಮಾದೇಗೌಡ, ಉಮೇಶ್, ಚೇತನ್, ರಾಜೇಶ್, ಮಧುಸೂದನ್, ಕಂಚಯ್ಯರ ಕುಮಾರ್, ಕಾಂತರಾಜು, ಕುಮಾರ್, ಅರುಣ ಇತರರು ಇದ್ದರು.