ಪಾಂಡವಪುರದಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ

16-pnp 1
ಆರ್‌ಸಿಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನೀಲನಹಳ್ಳಿ ಧನಂಜಯ, ಕೆ.ಎಲ್.ಆನಂದ್, ಮಂಗಳಾ ನವೀನ್ ಇತರರು ಇದ್ದರು.
Published on

ಪಾಂಡವಪುರ: ಕಾಂಗ್ರೆಸ್ ಸರ್ಕಾರದ ಹೊಣೆಗೇಡಿತನದಿಂದ ಕಾಲ್ತುಳಿತ ಪ್ರಕರಣದಲ್ಲಿ 11 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.

ಮೈಷುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೆಗೌಡ ಮಾತನಾಡಿ, ಇತ್ತೀಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಆರ್‌ಸಿಬಿ ವಿಜಯೋತ್ಸವದ ಲಾಭ ಪಡೆಯುವ ಉದ್ದೇಶದಿಂದ ಸರ್ಕಾರ ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದೆ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಇದರ ಪರಿಣಾಮವೇ 11 ಜನರ ಸಾವಿಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಲೋಪವಿಲ್ಲ. ಜತೆಗೆ ಪೊಲೀಸ್ ಇಲಾಖೆ ತಕ್ಷಣಕ್ಕೆ ಕಾರ್ಯಕ್ರಮ ಆಯೋಜಿಸುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದರೂ ಸರ್ಕಾರ ಆರ್‌ಸಿಬಿ ವಿಜಯದ ಲಾಭ ಪಡೆಯಲು ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿ, ಅಮಾಯಕರ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿದರು.

ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ತಮ್ಮ ಶಕ್ತಿ ಮೀರಿ ಅಮಾಯಕರ ಪ್ರಾಣ ಉಳಿವಿಗೆ ಹೋರಾಟ ನಡೆಸಿದ್ದಾರೆ. ಹೀಗಾಗಿ ಪೊಲೀಸ್ ಅಧಿಕಾರಿಗಳ ಅಮಾನತು ಆದೇಶವನ್ನು ಹಿಂಪಡೆಯಬೇಕು. ಕಾರ್ಯಕ್ರಮ ಆಯೋಜಕರಾದ ಡಿ.ಕೆ.ಶಿವಕುಮಾರ್ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ನೀಲನಹಳ್ಳಿ ಧನಂಜಯ, ಜಿಲ್ಲಾ ಕಾರ್ಯದರ್ಶಿ ಕೆ.ಎಲ್.ಆನಂದ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಗಳಾ ನವೀನ್, ಎಸ್‌ಎನ್‌ಟಿ ಸೋಮಶೇಖರ್, ಪುರುಷೋತ್ತಮ್, ಹರಳಹಳ್ಳಿ ರಾಮಚಂದ್ರ, ನಲ್ಲಹಳ್ಳಿ ಸುರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net