ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ

15 NRL
Published on

ನರೇಗಲ್ಲ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆಗೆ ಭಾನುವಾರ ರೋಣ ಪಟ್ಟಣಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪುಪಟ್ಟಿ ಪ್ರದರ್ಶನ ಮಾಡುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ರೋಣದಲ್ಲಿ ಪಂಚಮಸಾಲಿ ಯುವ ಮುಖಂಡರಾದ ಉಮೇಶ ಚನ್ನು ಪಾಟೀಲ, ಶಿವಕುಮಾರ ದಡ್ಡೂರ, ಮಲ್ಲಿಕಾರ್ಜುನ ಸಂತೋಜಿ, ವೀರಣ್ಣ ನಾಯಕ ಸೇರಿ ಅನೇಕರನ್ನು ವಶಕ್ಕೆ ಪಡೆದು ನರೇಗಲ್ಲ ಠಾಣೆಗೆ ಕರೆತಂದಾಗ ಸ್ಥಳೀಯ ಮುಖಂಡರು ಠಾಣೆ ಮುಂಭಾಗದ ರಾಜ್ಯ ಹೆದ್ದಾರಿ ಎರಡು ಗಂಟೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಇದರಿಂದ ಸಂಚಾರ ಬಿಗಡಾಯಿಸಿತು. ಹೆದ್ದಾರಿಯ ಎರಡೂ ಬದಿಯಲ್ಲಿ ಸಾಕಷ್ಟು ವಾಹನಗಳು ನಿಲ್ಲುವಂತಾಯಿತು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.

ಪಂಚಮಸಾಲಿ ಸಮಾಜದ ಅಧ್ಯಕ್ಷ ಮುತ್ತಣ್ಣ ಪಲ್ಲೇದ ಮಾತನಾಡಿ, ಸರ್ಕಾರ ಪಂಚಮಸಾಲಿ ಸಮಾಜದ ಹೋರಾಟವನ್ನು ಪೊಲೀಸ್ ಇಲಾಖೆಯ ಮೂಲಕ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ರೋಣದಲ್ಲಿ ಪ್ರತಿಭಟನೆಗೆ ಸಮಾಜ ಕರೆ ನೀಡಿರಲಿಲ್ಲ. ಆದರೂ ಮುಖಂಡರನ್ನು ಬಂಧಿಸುವ ಮೂಲಕ ಸಮಾಜಕ್ಕೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿದರು.

ಪಪಂ ಮಾಜಿ ಅಧ್ಯಕ್ಷ, ಶರಣಪ್ಪ ಕಲಾಲಬಂಡಿ, ಕಲ್ಮೇಶ ತೊಂಡಿಹಾಳ, ಮಾಜಿ ಸದಸ್ಯ ಶಶಿಧರ ಸಂಕನಗೌಡ್ರ, ಬಸವರಾಜ ಕೋಟಗಿ ಮಾತನಾಡಿ, ಸಮಾಜದ ಮುಖಂಡರನ್ನು ಬಂಧಿಸಲು ಏನು ಕಾರಣ?. ಈ ಮೂಲಕ ಸಮಾಜಕ್ಕೆ ಅಪಮಾನ ಮಾಡಲಾಗಿದೆ ಎಂದು ದೂರಿದರು.

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವೋಲಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ. ಬಂಧಿತರನ್ನು ಬಿಡುಗಡೆಗೊಳಿಸುವ ವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದರು. ಕೊನೆಗೆ ಮುಖ್ಯಮಂತ್ರಿ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಬಂಧಿತರನ್ನು ಬಿಡುಗಡೆ ಮಾಡಲಾಯಿತು. ನಂತರ ಪ್ರತಿಭಟನೆ ಕೈಬಿಡಲಾಯಿತು. ಸಂಚಾರ ತಹಬದಿಗೆ ಬರಲು ಬಹಳ ಸಮಯ ಹಿಡಿಯಿತು. ಏಕಾಏಕಿ ರಸ್ತೆ ತಡೆ ನಡೆಸಿದ್ದರಿಂದ ಗದಗ- ಗಜೇಂದ್ರಗಡ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಯಿತು. ಬಹಳ ಹೊತ್ತು ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಗಂಗಾಧರ ಕೋಟಗಿ, ಅಶೋಕ ಬೇವಿನಕಟ್ಟಿ, ನಿಂಗಪ್ಪ ಕಣವಿ, ಪಪಂ ಸದಸ್ಯ ಶ್ರೀಶೈಲಪ್ಪ ಬಂಡಿಹಾಳ, ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ಸಿದ್ದಪ್ಪ ನರಗುಂದ, ಶಾಂತಪ್ಪ ಚಿಕ್ಕೊಪ್ಪ, ವೀರಣ್ಣ ಧರಣೆಪ್ಪಗೌಡ್ರ, ರಮೇಶ ಕೋಲಕಾರ, ರುದ್ರೇಶ ಕೊಟಗಿ, ಕುಬೇರಪ್ಪ ತಮ್ಮನಗೌಡ್ರ, ಸಂತೋಷ ಮಾಳವಾಡ, ವೀರಣ್ಣ ಗುಜಮಾಗಡಿ, ರವಿ ಮುಗಳಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net