

ಮಹಾಲಿಂಗಪುರ: ತಾಲೂಕು ಹೋರಾಟ ಒಂದು ಸಾವಿರ ದಿನಗಳನ್ನು ಪೂರೈಸಿದರೂ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ಸೋಮವಾರ ತಾಲೂಕು ಹೋರಾಟ ಸಮಿತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸ್ಥಳೀಯ ಬಸವೇಶ್ವರ ವೃತ್ತದಿಂದ ಪ್ರತಿಭಟನಾಕಾರರು ಪಾದಯಾತ್ರೆಯಲ್ಲಿ ಡಬಲ್ ರಸ್ತೆ, ನಡುಚೌಕಿ, ಜವಳಿ ಬಜಾರ, ಗಾಂಧಿ ವೃತ್ತ ಮೂಲ ರಾಣಿ ಚನ್ನಮ್ಮ ವೃತ್ತ ತಲುಪಿ ಅಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಮಾತನಾಡಿ, ಮಹಾಲಿಂಗಪುರ ತಾಲೂಕು ಘೋಷಣೆಗೆ ಆಗ್ರಹಿಸಿ ಅಂದಾಜು 35 ವರ್ಷಗಳಿಂದ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತ ಬರಲಾಗಿದೆ. ಸತತ 1 ಸಾವಿರ ದಿನಗಳಿಂದ ರಾಣಿ ಚನ್ನಮ್ಮ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ. ಆದರೆ, ಯಾವುದೇ ಸರ್ಕಾರಗಳು ಬರೀ ಮಾತಿನಲ್ಲಿ ಹೇಳುತ್ತಿವೆ. ಆದರೆ ಕೃತಿಯಲ್ಲಿ ಮಾತ್ರ ಏನೂ ಮಾಡುತ್ತಿಲ್ಲ. ಜಿಲ್ಲಾಧಿಕಾರಿಗಳೂ ಒಂದು ಬಾರಿಯೂ ಹೋರಾಟ ಸ್ಥಳಕ್ಕೆ ಬಂದಿಲ್ಲ. ನಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿಲ್ಲ, ಇನ್ನಾದರೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ನಮ್ಮ ತಾಲೂಕಿನ ಬಗ್ಗೆ ಸರ್ಕಾರ ಮಟ್ಟದಲ್ಲಿ ತಾವು ಯಾವ ವರದಿ ಕಳಿಸಿದ್ದೀರಿ ಎಂದು ತಿಳಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಗಂಗಾಧರ ಮೇಟಿ ಮತ್ತು ರನ್ನಬೆಳಗಲಿ ಪಪಂ ಮಾಜಿ ಅಧ್ಯಕ್ಷ ಸಿದ್ದುಗೌಡ ಪಾಟೀಲ, ಮಹಾಲಿಂಗಪುರ ತಾಲೂಕಾಗಿ ಘೋಷಿಸಲು ಎಲ್ಲ ಸೌಲಭ್ಯ ಹೊಂದಿದೆ. ಆದರೂ ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷೃದಿಂದ ಇನ್ನೂವರೆಗೂ ತಾಲೂಕಾಗದೆ ಹಾಗೆ ಉಳಿದಿದೆ. ಆದರೆ, ಇಷ್ಟು ದಿನ ಕಾದಿರುವ ನಾವುಗಳು ಇನ್ನು ಸುಮ್ಮನಿರಲ್ಲ. ಮಹಾಲಿಂಗಪುರದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿ ರಸ್ತೆ ಸಂಚಾರ ತಡೆಗೊಳಿಸಿ ಉಗ್ರ ಹೋರಾಟ ಮಾಡಬೇಕಾದ ಅನಿವಾರ್ಯತೆ ನಮ್ಮ ಸರ್ಕಾರವೆ ತಂದೊಡ್ಡಿದೆ. ಅಲ್ಲದೆ, ಮುಂದೆ ಅಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಯಾಗಬೇಕಿದೆ ಎಂದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮಾತನಾಡಿ, ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮಹಾಲಿಂಗಪುರ ತಾಲೂಕು ಮಾಡಲು ಪ್ರಸ್ತಾವನೆ ಕಳಿಸಿದ್ದೇವೆ. ಸಣ್ಣ- ಪುಟ್ಟ ಸಮಸ್ಯೆಗಳಿರುವುದರಿಂದ ಸ್ವಲ್ಪ ತಡವಾಗಿದೆ. ಬುಧವಾರ ಅಥವಾ ಗುರುವಾರದೊಳಗೆ ಜಿಲ್ಲಾಧಿಕಾರಿಗಳನ್ನು ಇಲ್ಲಿಗೆ ಕರೆದುಕೊಂಡು ಬಂದು ನಿಮ್ಮೊಂದಿಗೆ ಮಾತನಾಡಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇವೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಮುಖಂಡರಾದ ಮನೋಹರ ಶಿರೋಳ, ಹೋರಾಟಗಾರರಾದ ಚನಬಸು ಹುರಕಡ್ಲಿ, ಬಂದು ಪಕಾಲಿ, ಮಾರುತಿ ಕರೋಶಿ, ವಿರೇಶ ಆಸಂಗಿ, ಶಿವನಗೌಡ ಪಾಟೀಲ, ನಿಂಗಪ್ಪ ಬಾಳಿಕಾಯಿ, ಮುಖಂಡರಾದ ಶೇಖರ ಅಂಗಡಿ, ಪ್ರಲ್ಹಾದ ಸಣ್ಣಕ್ಕಿ, ಮಹಾದೇವ ಮೇಟಿ, ಮಲ್ಲಪ್ಪ ಸಿಂಗಾಡಿ, ಪರಪ್ಪ ಸತ್ತಿಗೇರಿ, ಸಿದ್ದು ಬೆನ್ನೂರ, ರಾಜು ಬಾವಿಕಟ್ಟಿ, ಮಹಮ್ಮದ ಹುಲಿಕಟ್ಟಿ, ಸಲೀಂ ಕರೋಶಿ, ಮಹಮ್ಮದರಫಿಕ್ ಮಾಲದಾರ, ದುಂಡಪ್ಪ ಜಾಧವ, ಸಿದ್ದು ಶಿರೋಳ, ಚನ್ನು ದೇಸಾಯಿ, ವಿಜಯ ಸಬಕಾಳೆ ಇತರರಿದ್ದರು.