

ಹೊಳೆನರಸೀಪುರ: ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಸರ್ಕಾರದ ಧೋರಣೆ ಖಂಡನೀಯ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲೂಕು ರೈತ ಸಂಘ ಹಾಘೂ ಛಾಯಾಗ್ರಾಹಕರ ಸಂಘದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಸಂಘಟನೆಯ ಸದಸ್ಯರು ಅಂಬೇಡ್ಕರ್ ವೃತ್ತದ ಮೂಲಕ ಮೆರವಣಿಗೆ ಸಾಗಿ ಹಾಸನ- ಮೈಸೂರು ರಸ್ತೆಯ ಪಶುವೈದ್ಯಕೀಯ ಆಸ್ಪತ್ರೆ ಮುಂಭಾಗ ಕೆಲಕಾಲ ವಾಹನಗಳ ಸಂಚಾರ ತಡೆದರು.
ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ನಮ್ಮ ನೀರಿನ ಲಭ್ಯತೆಯನ್ನು ಸರಿಯಾಗಿ ವಿವರಿಸದೆ ರಾಜ್ಯದ ಜನರಿಗೆ ಅನ್ಯಾಯ ಮಾಡಿದೆ. ನಮಗೆ ಕುಡಿಯುವುದಕ್ಕೆ ನೀರಿಲ್ಲದ ಕಾರಣ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸದೆ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಿ ರಾಜ್ಯದ ಜನತೆಯ ಹಿತ ಕಾಪಾಡಿ ಎಂದು ಆಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಜಿಲ್ಲೆಯ ಎಲ್ಲ ತಾಲೂಕುಗಳು ಬರ ಪರಿಸ್ಥಿತಿಯನ್ನು ಎದರಿಸುತ್ತಿವೆ. ಆದರೆ ಅರಕಲಗೂಡು ತಾಲೂಕು ಒಂದರಲ್ಲಿ ಮಾತ್ರ ಬರ ಪರಿಸ್ಥಿತಿ ಇದೆ ಎಂದು ವರದಿ ನೀಡಿರುವುದು ಸರಿಯಲ್ಲ. ಹಾಸನ ಜಿಲ್ಲೆಯ ಎಲ್ಲ ತಾಲೂಕುಗಳು ಬರಪೀಡಿತ ತಾಲೂಕುಗಳು ಎಂದು ಘೋಷಿಸಿ ಅಗತ್ಯ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರಕ್ಷಣಾ ವೇದಿಕೆ ಅಧ್ಯಕ್ಷ ಓಹಿಲೇಶ್, ನವೀನ್, ರಂಗಸ್ವಾಮಿ, ರೇವಣ್ಣ, ಪುರಸಭಾ ಸದಸ್ಯ ಎಚ್.ಕೆ.ಪ್ರಸನ್ನ, ಗೋವಿಂದ, ರೈತ ಸಂಘದ ಜಿಲ್ಲಾಧ್ಯಕ್ಷ ರಘು, ಮುಖಂಡ ಸೋಮಶೇಖರ್, ಕಾರ್ಯದರ್ಶಿ ನರಸಿಂಹ, ತಾಲೂಕು ಛಾಯಾಗ್ರಾಹಕ ಸಂಘದ ಅಧ್ಯಕ್ಷ ಧನ್ಯಕುಮಾರ್, ನರಸಿಂಹ, ಅಶೋಕ್ ಸುಮಂತ್, ವೆಂಕಟಸ್ವಾಮಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.