ರಸ್ತೆ ಸಂಚಾರ ತಡೆದು ಪ್ರತಿಭಟನೆ

3
Published on


ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಮೈಸೂರು-ನಂಜನಗೂಡು ರಸ್ತೆಯ ಎಪಿಎಂಸಿ ರಿಂಗ್ ರೋಡ್ ಜಂಕ್ಷನ್‌ನಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಸರ್ವಾಧಿಕಾರಿಗಳು. ಇವರನ್ನು ಬಿಟ್ಟು ಯಾರು ಸಹ ಬೆಳೆಯಬಾರದು, ವಿರೋಧಿಸಬಾರದು, ಪ್ರಶ್ನಿಸಬಾರದು ಎಂಬ ಮನಸ್ಥಿತಿ ಹೊಂದಿದ್ದಾರೆ. ಇವರು ದೇಶದ ಎಲ್ಲ ರಾಜ್ಯಗಳ ಬಿಜೆಪಿಯೇತರ ಸರ್ಕಾರಗಳನ್ನು ಅಸ್ಥಿರಗೊಳಿಸಿ ದೇಶವ್ಯಾಪಿ ಬಿಜೆಪಿ ಸರ್ಕಾರ ತರಬೇಕು ಎಂಬ ಗುರಿ ಇಟ್ಟುಕೊಂಡಿದ್ದಾರೆ ಎಂದು ದೂರಿದರು.
ಚುನಾವಣೆ ಮೂಲಕ ದಕ್ಷಿಣ ಭಾರತದ ರಾಜ್ಯಗಳನ್ನು ಹಣಿಯಲು ಸಾಧ್ಯವಾಗಿಲ್ಲ. ಹೀಗಾಗಿ ರಾಜ್ಯಪಾಲರ ಮೂಲಕ ರಾಜ್ಯ ಸರ್ಕಾರಗಳಿಗೆ ಕಿರುಕುಳ ಕೊಡುವ ಕೆಲಸ ಪ್ರಾರಂಭಿಸಿದ್ದು ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಬೇರೆ ಪಕ್ಷಗಳ ಮುಖ್ಯಮಂತ್ರಿಗಳನ್ನು ಇ.ಡಿ. ಮೂಲಕ ಬಂಧಿಸಿದ್ದಾರೆ. ಕರ್ನಾಟಕದಲ್ಲೂ ಪದ್ಮರಾಜ್ ಎಂಬ ಅಧಿಕಾರಿಯನ್ನು ಇ.ಡಿ. ಅವರು ಬಂಧಿಸಿ ಅವರಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರ ಹೆಸರು ಹೇಳುವಂತೆ ಒತ್ತಡ ಹೇರುತ್ತಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕುತಂತ್ರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸಂವಿಧಾನದ ಉಲ್ಲಂಘನೆ. ವಿಚಾರಣೆ ಮಾಡುವ ಕೆಲಸ ಮಾಡಲೇ ಇಲ್ಲ. ಇದರಿಂದ ಯಾವ ತೊಂದರೆಯೂ ಸಿದ್ದರಾಮಯ್ಯ ಅವರಿಗೆ ಇಲ್ಲ. ಕೋರ್ಟ್‌ನಲ್ಲಿ ಇದು ತಿರಸ್ಕಾರ ಆಗಿ ಸತ್ಯಕ್ಕೆ ಜಯ ದೊರಕುವುದು ನಿಶ್ಚಿತ. ಸಿದ್ದರಾಮಯ್ಯ ಅವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ, ಪ್ರಭಾವ ಬಳಸಿಲ್ಲ, ಕುಮ್ಮಕ್ಕು ಸಹ ನೀಡಿಲ್ಲ. ಹೀಗಾಗಿ ಇಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ಆಗುವುದಿಲ್ಲ. ಸತ್ಯ ಹೊರಬಂದ ಮೇಲೆ ಜನ ಬಿಜೆಪಿಗೆ ಬುದ್ಧಿ ಕಲಿಸುತ್ತಾರೆ. ಇದೇ ರೀತಿ ಮುಂದುವರಿದರೆ ರಾಜ್ಯದಲ್ಲಿ ಜನ ಧಂಗೆ ಏಳುತ್ತಾರೆ. ಬಾಂಗ್ಲಾ ದೇಶದಂತೆ ಪರಿಸ್ಥಿತಿ ಭಾರತದಲ್ಲೂ ಉಂಟಾಗುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.
ಮುಖಂಡರಾದ ಶ್ರೀಧರ್, ಬಸವರಾಜು, ರವಿಶಂಕರ್, ಜೆ.ಗೋಪಿ, ಎಂ.ಸುನಿಲ್, ಆರ್.ಎಚ್.ಕುಮಾರ್, ವಿಶ್ವನಾಥ್, ಮಾರ್ಬಳ್ಳಿ ಕುಮಾರ್, ರಮೇಶ್ ರಾಮಪ್ಪ, ಉತ್ತನಹಳ್ಳಿ ಶಿವಣ್ಣ, ಹರೀಶ್, ವಿಜಯ್‌ಕುಮಾರ್, ಮೂರ್ತಿ, ಜಗದೀಶ್, ಮಹೇಂದ್ರ, ಭವ್ಯಾ, ವೀಣಾ, ಇಂದ್ರಮ್ಮ, ಚಂದ್ರಕಲಾ, ಮಲ್ಲಾಜಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net