

ಪಾಂಡವಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ರೈತರ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿವೆ ಎಂದು ಆರೋಪಿಸಿ ರೈತ ಸಂಘ ಕಾರ್ಯಕರ್ತರು ಗುರುವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಪಟ್ಟಣದ ಐದು ದೀಪ ವೃತ್ತದಲ್ಲಿ ಜಮಾವಾಣೆಗೊಂಡ ಪ್ರತಿಭಟನಾಕಾರರು, ಶ್ರೀರಂಗಪಟ್ಟಣ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ಕೆಲ ಕಾಲ ವಾಹನ ಸಂಚಾರ ತಡೆದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿವೆ ಎಂದು ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘ ತಾಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರನ್ನು ಜೀತದಾಳುಗಳಾಗಿ ನೋಡುತ್ತಿವೆ. ವರ್ಷ ಪೂರ್ತಿ ಭತ್ತ ಖರೀದಿ ಕೇಂದ್ರ ತೆರೆಯಬೇಕು, ಜತೆಗೆ ಎಂಎಸ್‌ಪಿ ಶಾಸನಬದ್ಧವಾಗಿ ಜಾರಿಯಾಗಬೇಕು, ತಾಲೂಕು ಮತ್ತು ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ನಿಲ್ಲಬೇಕು, ರೈತರು, ಬಡವರು ತಮ್ಮ ಕೆಲಸ ಕಾರ್ಯಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವುದು ಶಾಶ್ವತವಾಗಿ ನಿಲ್ಲಬೇಕು. ಆರ್‌ಟಿಸಿಗಳಲ್ಲಿ ಆಗಿರುವ ಲೋಪದೋಷಗಳಿಗೆ ಸರ್ಕಾರವೇ ಸರಿಪಡಿಸಕೊಡಬೇಕು ಒತ್ತಾಯಿಸಿದರು.
ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ ಮಾತನಾಡಿ, ಹಳ್ಳಿಗಳಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಯಿಂದಾಗಿ ಕುಟುಂಬಗಳು ಗ್ರಾಮಗಳಿಂದ ಗುಳೆಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣಾ ಪ್ರದೇಶದಲ್ಲಿ ಅಶಾಂತಿ ನಿರ್ಮಾಣವಾಗಿದೆ. ಇಂತಹ ಕಂಪನಿಗಳನ್ನು ಶಾಶ್ವತವಾಗಿ ಮುಚ್ಚಬೇಕು. ದೆಹಲಿಯಲ್ಲಿ ಉಪವಾಸನಿರತ ರೈತ ಜಗಜೀತ್ ಸಿಂಗ್ ದಲ್ಲೇವಾಲರ ಆಗ್ರಹವನ್ನು ಈಡೇರಿಸಬೇಕು. ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ನೀಡಬೇಕಾದ ಕಬ್ಬಿನ ಬಾಕಿ, ಟನ್‌ವೊಂದಕ್ಕೆ ನೂರು ರೂ.ಹೆಚ್ಚುವರಿಯಾಗಿ ಕೂಡಲೇ ಪಾವತಿಯಾಗಬೇಕು ಎಂದು ಆಗ್ರಹಿಸಿದರು.
ಹಿರಿಯ ಮುಖಂಡ ಹರವು ಪ್ರಕಾಶ್ ಮಾತನಾಡಿ, ಎಪಿಎಂಸಿ ಮಾರುಕಟ್ಟೆಯಲ್ಲಿ ಕಾನೂನು ಬಾಹಿರವಾಗಿ ರೈತರಿಂದ ಕಮಿಷನ್ ವಸೂಲಿ ನಿಲ್ಲಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಸಾಲ ಮನ್ನಾ ಯೋಜನೆ ರೈತರ ಸಾಲ ಮನ್ನಾ ಮಾಡಿದರು. ಆದರೆ ಮಂಡ್ಯದ ರೈತ ಸಾಲಮನ್ನಾ ಫಲನುಭವಿಗಳಿಗೆ 16 ಕೋಟಿ ಸಾಲ ಮನ್ನಾ ಬಾಕಿ ಉಳಿದಿದೆ. ಅದಷ್ಟು ಬೇಗ ಪರಿಹರಿಸಬೇಕು ಎಂದು ಇದೇ ಮನವಿ ಮಾಡಿದರು.
ರೈತ ಮುಖಂಡರಾದ ಹರವು ಎಸ್.ದಯಾನಂದ, ಎಣ್ಣೆಹೊಳೆಕೊಪ್ಪಲು ವೈ.ಪಿ.ಮಂಜು, ವೈ.ಜಿ.ರಘು, ಗೋವಿಂದರಾಜು, ಚೆಲುವರಾಜು, ಗೌಡೇಗೌಡ, ಚಿಕ್ಕಾಡೆ ವಿಜೇಂದ್ರ, ಗೋಪಾಲ್, ಮಹದೇವ್, ಕದಲಗೆರೆ ರಾಮು, ಯೋಗಣ್ಣ, ಕೊನ್ನಾರಿ ಮಂಜು ಇತರರು ಇದ್ದರು.