ಬಸ್ ಸಂಚಾರ ತಡೆದು ಪ್ರತಿಭಟನೆ

klr cross 24-1
ಚಿಮ್ಮನಕಟ್ಟಿ ಗ್ರಾಮದ ಪಕ್ಕದಲ್ಲಿರುವ ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಬಾರದ ಬಸ್ ತಡೆದು ಪ್ರತಿಭಟನೆ ನಡೆಸಿದರು.
Published on

ಕುಳಗೇರಿ ಕ್ರಾಸ್: ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಚಿಮ್ಮನಕಟ್ಟಿ ಹಾಗೂ ಕಾಕನೂರ ಗ್ರಾಮಗಳಿಗೆ ಸಮರ್ಪಕ ಬಸ್ ಸೌಕರ್ಯವಿಲ್ಲದೆ ನಿತ್ಯ ಪರದಾಡುವಂತಾಗಿದೆ ಎಂದು ಮಂಗಳವಾರ ವಿದ್ಯಾರ್ಥಿಗಳು ಬಸ್ ಸಂಚಾರ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.

ಚಿಮ್ಮನಕಟ್ಟಿ ಹಾಗೂ ಕಾಕನೂರ ಬಾದಾಮಿ ತಾಲೂಕಿನ ಗ್ರಾಮಗಳಾದರೂ ಬೆಳಗಾವಿ ಜಿಲ್ಲೆ ರಾಮದುರ್ಗ ಘಟಕದ ಬಸ್ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ರಾಜ್ಯ ಹೆದ್ದಾರಿ ಇದ್ದರೂ ನಮ್ಮ ಗ್ರಾಮಗಳಿಗೆ ಬಾದಾಮಿ ಘಟಕದ ಬಸ್ ಸಂಚಾರ ಅಪರೂಪ. ರಾಮದುರ್ಗ ಘಟಕದ ಬಸ್‌ಗಳ ಓಡಾಟವೇ ಹೆಚ್ಚು. ಸಮಯಕ್ಕೆ ಸರಿಯಾಗಿ ಬಸ್ ಬರೋದಿಲ್ಲ ಎಂದು ಕಾರಣ ಕೇಳಿದರೆ ರಾಮದುರ್ಗ ಘಟಕದವರು ಸಂಬಂಧವಿಲ್ಲದ ಹಾರಿಕೆ ಉತ್ತರ ಕೊಡುತ್ತಾರೆ. ಇದರಿಂದಾಗಿ ನಿಗದಿತ ಸಮಯಕ್ಕೆ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಅದರಿಂದ ಪ್ರತಿಭಟನೆ ಅನಿವಾರ್ಯವಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಸರಿಯಾದ ಸಮಯಕ್ಕೆ ಬಸ್ ಸಂಪರ್ಕ ಕಲ್ಪಿಸಬೇಕು ಹಾಗೂ ಬಾದಾಮಿ ಘಟಕದಿಂದ ಕುಳಗೇರಿ ಕ್ರಾಸ್‌ವರೆಗೆ ಬರುವ ಬಸ್ ಬೆಳಗ್ಗೆ ಹಾಗೂ ಸಂಜೆ ಕಾಕನೂರವರೆಗೆ ಸಂಚರಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಬಾದಮಿ ಘಟಕದ ಮ್ಯಾನೇಜರ್ ಆರ್.ಸಿ. ಖೇಡದ ಅವರು, ರಾಮದುರ್ಗ ಡಿಪೋ ಮ್ಯಾನೇಜರ್ ಜತೆಗೆ ಮಾತನಾಡುತ್ತೇನೆ ಹಾಗೂ ನಮ್ಮ ಘಟಕದಿಂದ ಬರುವ ಬಸ್ ಸಮಯ ನೋಡಿಕೊಂಡು ವಿದ್ಯಾರ್ಥಿಗಳಿಗೆ ಅನಕೂಲವಾಗುವಂತೆ ಸರಿಯಾದ ಸಮಯಕ್ಕೆ ಬಸ್ ಸಂಚಾರ ಕಲ್ಪಿಸುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net