ರಾಜ್ಯಪಾಲರ ನಡೆಗೆ ಕಾಂಗ್ರೆಸ್ ಕಿಡಿ

20BK3
ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆ ವಿರೋಧಿಸಿ ಬಸವಕಲ್ಯಾಣದಲ್ಲಿ ಮಂಗಳವಾರ ಮಾಜಿ ಎಂಎಲ್‌ಸಿ ವಿಜಯಸಿಂಗ್ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-೨ ತಹಸೀಲ್ದಾರ್ ರಮೇಶಬಾಬು ಹಾಲು ಅವರಿಗೆ ಸಲ್ಲಿಸಲಾಯಿತು. ನೀಲಕಂಠ ರಾಠೋಡ್, ಮೀರ್ ಅಜರಲಿ ನವರಂಗ, ಸವಿತಾ ಕಾಂಬಳೆ, ಅರ್ಜುನ ಕನಕ ಇತರರಿದ್ದರು.
Published on

ಬಸವಕಲ್ಯಾಣ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು ವಿರೋಧಿಸಿ ಮಾಜಿ ಎಂಎಲ್ಸಿ ವಿಜಯಸಿಂಗ್ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಗಾಂಧಿ ವೃತ್ತದಿಂದ ಮುಖ್ಯರಸ್ತೆಯ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನೆ ಪ್ರತಿಭಟನಾ ಮೆರವಣಿಗೆ ನಡೆಸಿ ವೃತ್ತದ ಬಳಿ ಟೈರ್‌ಗೆ ಬೆಂಕಿ ಹಚ್ಚಿ ರಾಜ್ಯಪಾಲರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಸ್ಥಳಕ್ಕೆ ಭೇಟಿ ನೀಡಿದ ಗ್ರೇಡ್-೨ ತಹಸೀಲ್ದಾರ್ ಡಾ.ರಮೇಶಬಾಬು ಹಾಲು ಅವರಿಗೆ ಸಲ್ಲಿಸಲಾಯಿತು.

ಮಾಜಿ ಎಂಎಲ್ಸಿ ವಿಜಯಸಿಂಗ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ನಾಯಕರಾಗಿ ದಕ್ಷ ಹಾಗೂ ಜನಪರ ಆಡಳಿತ ನೀಡುತ್ತಿದ್ದಾರೆ. ಇದು ಬಿಜೆಪಿಯವರಿಗೆ ಹಿಡಿಸುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ರಾಜ್ಯಪಾಲರು ದ್ವೇಷದ ರಾಜಕಾರಣ ಮಾಡುತ್ತಿದ್ದು ಪಕ್ಷ ಸಹಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ನೀಲಕಂಠ ರಾಠೋಡ್, ನಗರ ಅಧ್ಯಕ್ಷ ಮೀರ್ ಅಜರಲಿ ನವರಂಗ, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಕಾಂಬಳೆ, ಮಾಜಿ ಅಧ್ಯಕ್ಷ ಅರ್ಜುನ ಕನಕ ಮಾತನಾಡಿದರು. ಪ್ರಮುಖರಾದ ಶಹಾಜಹಾನ್ ಶೇಖ್ ತನ್ವೀರ್ ಅಹ್ಮದ್, ಬಸವರಾಜ ಸ್ವಾಮಿ, ಮನೋಹರ ಮೈಸೆ, ಯುವರಾಜ ಭಂಡೆ, ತಹಸೀನ್ ಅಲಿ ಜಮಾದಾರ್, ರಾಜು ಸುಗರೆ, ನಗರ ಸಭೆ ಸದಸ್ಯರಾದ ರವೀಂದ್ರ ಬೋರಾಳೆ, ರಾಮ ಜಾಧವ್, ಮಲ್ಲಿಕಾರ್ಜುನ ಬೊಕ್ಕೆ, ಅಮ್ಜದ್ ನವರಂಗ, ಪವನ ಗಾಯಕವಾಡ, ಭೀಮಶಾ ಫುಲೆ, ಕರಿಂ ಸಾಬ್, ಸಗಿರೋದ್ದಿನ್, ರಾಮ ಗೋಡಬೋಲೆ, ಇಮ್ರಾನ್ ಖಾನ್, ಅನುಷಾಯಿ ಮಂಠಾಳಕರ, ಆರತಿ ರಾಠೋಡ ಸೇರಿ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net